ಬೆಂಗಳೂರು,ಸೆ.30-ನಿತ್ಯೋತ್ಸವ ಸೇರಿದಂತೆ ತಮ್ಮೆಲ್ಲ ಹಾಡುಗಳಿಗೆ ಜನಮನ್ನಣೆ ಸಿಗಲು ಗಾಯಕರ ಪಾತ್ರ ಬಹಳ ಮುಖ್ಯ ಎಂದು ಪ್ರಸಿದ್ಧ ಕವಿ ಪೆÇ್ರ.ಕೆ.ಎಸ್.ನಿಸಾರ್ ಅಹಮ್ಮದ್ ಅಭಿಪ್ರಾಯಪಟ್ಟರು.
ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಇಂದು ನಡೆದ ಸಾವಣ್ಣ ಪ್ರಕಾಶನದ ಪುಸ್ತಕಗಳ ಲೋಕಾರ್ಪಣೆ ಸಂಭ್ರಮದಲ್ಲಿ ಮಾತನಾಡಿದ ಅವರು, ತಮ್ಮ ಎಲ್ಲ ಜನಪ್ರಿಯ ಹಾಡುಗಳಿಗೆ ಲೋಕ ಮನ್ನಣೆ ಸಿಗಲು ಗಾಯಕರಾದ ಮೈಸೂರು ಅನಂತಸ್ವಾಮಿ ಮೊದಲಾದವರು ಕಾರಣ ಎಂದು ಹೇಳಿದರು.
ಶಿವಮೊಗ್ಗದ ಹಸಿರು ಪರಿಸರ, ಅಲ್ಲಿನ ಗದ್ದೆ, ತೋಟಗಳು, ತುಂಗಾ ನದಿ ಎಲ್ಲವೂ ತಮಗೆ ಅಚ್ಚುಮೆಚ್ಚು. ಆದರೆ ಬೆಂಗಳೂರಿನ ಮನೆ ಮೇಲೆ ಕುಳಿತು ನಿತ್ಯೋತ್ಸವ ಕವಿತೆಯನ್ನು ರಚಿಸಿದ್ದಾಗಿ ನಿಸಾರ್ ತಿಳಿಸಿದರು.
ಪುಸ್ತಕಗಳ ಪ್ರಕಟಣೆ ಈಗ ಸುಲಭ ಮತ್ತು ಸರಳವಾಗುವಷ್ಟು ವೈಜ್ಞಾನಿಕ ತಂತ್ರಜ್ಞಾನ ಬೆಳೆದಿದೆ. ಈ ಹಿಂದೆ ಪುಸ್ತಕ ಪ್ರಕಟಣೆ ತುಂಬ ಕಷ್ಟವಾಗುತ್ತಿತ್ತು. ಹಾಗೂ ಸಾಕಷ್ಟು ಸಮಯ ಬೇಕಾಗುತ್ತಿತ್ತು ಎಂದು ಹೇಳಿದರು.
ಲೇಖಕರಾದ ಭಾರತಿ.ಬಿ.ವಿ ಅವರ ಜಸ್ಟ್ ಮಾತ್ ಮಾತಲ್ಲಿ, ಮೇಘನಾ ಸುಧೀಂದ್ರ ಅವರ ಜಯನಗರದ ಹುಡುಗಿ ಹಾಗೂ ರಂಗರಾಜ್ ಚಕ್ರವರ್ತಿ ಅವರ ಜಿಲೇಬಿ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಚಲನಚಿತ್ರ ನಟ ಶ್ರೀನಾಥ್, ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.