ನಡುವೆ ಅಂತರವಿರಲಿ ಚಿತ್ರದ ನಿರ್ದೇಶಕ ರವೀನ್ ಕುಮಾರ ಅವರಿಗೆ ಚಿತ್ರದ ಶೂಟಿಂಗ್ ಶೆಡ್ಯೂಲ್ ನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಾರಣ ಚಿತ್ರದ ನಾಯಕ-ನಾಯಕಿ ಐಶಾನಿ ಶೆಟ್ಟಿ ಮತ್ತು ಪ್ರಖ್ಯಾತ್ ಪರಮೇಶ್.ಇಬ್ಬರೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಾಗಿರುವುದರಿಂದ ತಮ್ಮ ಕಾಲೇಜು ಮತ್ತು ಶೂಟಿಂಗ್ ಸಮಯಗಳನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಪರಮೇಶ್ ದಯಾನಂದ ಸಾಗರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರೆ ಐಶಾನಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅವರ ಓದಿಗೆ ತೊಂದರೆಯಾಗದಂತೆ ಚಿತ್ರದ ಶೂಟಿಂಗ್ ಮಾಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಸಿನಿಮಾ ಮುಗಿಸಲು ಸ್ವಲ್ಪ ಸಮಯ ಹಿಡಿಯಿತು ಎನ್ನುತ್ತಾರೆ ನಿರ್ದೇಶಕ ರವೀನ್ ಕುಮಾರ್.ಅಕ್ಟೋಬರ್ 5ರಂದು ತೆರೆಗೆ ಬರಲು ಸಜ್ಜಾಗಿರುವ ನಡುವೆ ಅಂತರವಿರಲಿ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಒಪ್ಪಿಗೆ ಸಿಗಲು ಕೂಡ ಸ್ವಲ್ಪ ಕಷ್ಟವಾಯಿತಂತೆ. ಪರಿಷ್ಕರಣಾ ಸಮಿತಿಯಿಂದ ಕೊನೆಗೆ ಚಿತ್ರಕ್ಕೆ ಸರ್ಟಿಫಿಕೇಟ್ ಸಿಕ್ಕಿತಂತೆ. ಚಿತ್ರವನ್ನು ವೀಕ್ಷಿಸಿದ ಸ್ಥಳೀಯ ಸೆನ್ಸಾರ್ ಮಂಡಳಿ ಅಧಿಕಾರಿಗಳು, ಹದಿಹರೆಯದಲ್ಲಿನ ಪ್ರೀತಿಯ ಕಥೆಯಲ್ಲಿ ವಯಸ್ಕರಿಗೆ ಸಂಬಂಧಪಟ್ಟ ವಿಷಯಗಳಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಂತೆ.ಅವರ ವಾದ ನನಗೆ ಅರ್ಥವಾಗಿರಲಿಲ್ಲ. ನಾನು ಒಪ್ಪಿರಲಿಲ್ಲ. ವಾದ ಮುಂದುವರಿಸುವ ಬದಲು ಪರಿಷ್ಕರಣಾ ಸಮಿತಿ ಮುಂದೆ ನಾನು ಹೋದೆ. ನನ್ನ ಅದೃಷ್ಟಕ್ಕೆ ಪರಿಷ್ಕರಣಾ ಸಮಿತಿಯಲ್ಲಿ ನಿರ್ದೇಶಕ ನಾಗಾಭರಣ ಅವರು ಇದ್ದರು. ಚಿತ್ರವನ್ನು ವೀಕ್ಷಿಸಿ ಯಾವುದೇ ಕತ್ತರಿ ಹಾಕದೆ ಯು/ಎ ಸರ್ಟಿಫಿಕೇಟ್ ನೀಡಿದರು ಎಂದರು.ಚಿತ್ರಕ್ಕೆ ಸಂಗೀತ ಮಣಿಕಾಂತ್ ಕದ್ರಿ ಒದಗಿಸಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಚಿಕ್ಕಣ್ಣ ಮತ್ತು ತುಳಸಿ ಶಿವಮಣಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.