ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ಹೊಸದಿಲ್ಲಿ: ಶಬರಿಮಲೆ ದೇವಾಲಯ ಪ್ರವೇಶಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಶರೀರದ ಆಧಾರದ ಮೇಲೆ ದೇವಾಲಯ ಪ್ರವೇಶ ನಿಷೇಧಿಸುವಂತಿಲ್ಲ. ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಐವರು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಶಬರಿಮಲೆ ದೇಗುಲಕ್ಕೆ 10 ರಿಂದ 50 ವರ್ಷದ ಮಹಿಳೆಯರಿಗೂ ಪ್ರವೇಶ ನೀಡಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ಆಗಸ್ಟ್ 1ರಂದು ತೀರ್ಪು ಕಾಯ್ದಿರಿಸಿತ್ತು.

2006ರಲ್ಲಿ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್‌ ಹಾಗೂ ಇತರರು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ದಶಕದ ನಂತರ 2016ರ ಜನವರಿಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ 13ರಂದು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಈಗಾಗಲೇ ಹಿಂದಿನ ಹಲವು ವಿಚಾರಣೆ ವೇಳೆ ಮಹಿಳೆಯರ ಪ್ರವೇಶದ ಪರವಾಗಿ ಮಾತನಾಡಿರುವ ಸುಪ್ರೀಂ ಕೋರ್ಟ್, ಪುರುಷರಂತೆ ಮಹಿಳೆರಿಗೂ ಸಮಾನವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹೇಳಿದೆ.

ಎಲ್ಲೆಲ್ಲಿ ಪುರುಷರು ಹೋಗಬಹುದೋ ಅಲ್ಲಿಗೆ ಮಹಿಳೆಯರೂ ತೆರಳಬಹುದು. ಪುರುಷರಿಗೆ ಅನ್ವಯಿ ಸುವ ಸಂಗತಿಗಳೆಲ್ಲವೂ ಮಹಿಳೆಯರಿಗೂ ಅನ್ವಯಿಸುತ್ತವೆ. ದೇಗುಲಕ್ಕೆ ಪ್ರವೇಶಿಸುವುದು ಶಾಸನವನ್ನು ಆಧರಿಸಿಲ್ಲ. ಇದು ಸಾಂವಿಧಾನಿಕ ಹಕ್ಕು. ಇದಕ್ಕೆ ಸಂಬಂಧಿಸಿದಂತೆ ಸಂವಿಧಾನದ 25 ಹಾಗೂ 26ನೇ ಕಲಂನಲ್ಲಿ ವಿವರಿಸ ಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ