ಪರಿಸರ ಮಾಲಿನ್ಯ ನಿಯಂತ್ರಣ ಅನುಷ್ಠಾನಕ್ಕೆ ಅಧಿಕಾರಿಗಳು ಒಗ್ಗಟ್ಟಿನ ಕೆಲಸ ಮಾಡಬೇಕು: ಸಚಿವ ಆರ್.ಶಂಕರ್ ಕರೆ

ಬೆಂಗಳೂರು, ಸೆ.27-ನಗರದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಗ್ಗಟ್ಟಿನ ಕೆಲಸ ಮಾಡಬೇಕೆಂದು ಅರಣ್ಯ ಸಚಿವ ಆರ್.ಶಂಕರ್ ಕರೆ ನೀಡಿದರು.
ನಗರದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ಮಾಲಿನ್ಯ ನಿಯಂತ್ರಣ ಅನುಷ್ಠಾನ ಕುರಿತ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಪರಿಸರ ಊಹೆಗೂ ನಿಲುಕದ ರೀತಿಯಲ್ಲಿ ಮಲಿನಗೊಂಡಿದೆ. ನಾವೆಲ್ಲರೂ ತತ್‍ಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಪರಿಸರ ಹಾಳಾಗದಂತೆ ಸ್ವಚ್ಛವಾಗಿಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ. ಇದಕ್ಕಾಗಿ ಸಾರ್ವಜನಿಕರು, ಸಂಘಸಂಸ್ಥೆಗಳು, ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಿದಾಗ ಮಾತ್ರ ಈ ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಹನಗಳ ದಟ್ಟಣೆಯಿಂದ ಹೊರಸೂಸುವ ಹೊಗೆ ನೋಡಿದರೆ ಭಯವಾಗುತ್ತದೆ. ಇದರಿಂದ ರೋಗಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತೆಪಡಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವೈದ್ಯರ ರೀತಿ ಕೆಲಸ ಮಾಡಬೇಕು. ನೀವು ಮಾಲಿನ್ಯ ನಿಯಂತ್ರಿಸಲು ಯಾವುದೇ ಸಲಹೆಗಳು ನೀಡಿದರೂ ಸರ್ಕಾರ ಅದನ್ನು ಮುಕ್ತವಾಗಿ ಸ್ವೀಕರಿಸುತ್ತದೆ. ಮಾಲಿನ್ಯ ನಿಯಂತ್ರಣಕ್ಕಾಗಿಯೇ ರಾಜ್ಯ ಸರ್ಕಾರ 91 ಕೋಟಿ ಹಣವನ್ನು ಮೀಸಲಿಟ್ಟಿದೆ. ಬಿಡಿಎ, ಬಿಬಿಎಂಪಿ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾಲಕಾಲಕ್ಕೆ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಇಂದು ಮಂಡಳಿಯಲ್ಲಿ ಇರುವ ಸಿಬ್ಬಂದಿಗಳಿಗೇ ಸಾಕಷ್ಟು ಕೆಲಸವಿದೆ. ಕೇವಲ 709 ಮಂದಿ ಅಧಿಕಾರಿಗಳ ತಂಡ ಕೆಲಸ ನಿರ್ವಹಿಸುತ್ತಿದೆ. ಮಾಲಿನ್ಯ ನಿಯಂತ್ರಣ ಮಾಡುವುದು ಮಂಡಳಿಗೆ ಸವಾಲಾಗಿ ಪರಿಣಮಿಸಿದೆ. ಇರುವ ಸಿಬ್ಬಂದಿ ಹಗಲು-ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಅನುಮೋದನೆ ದೊರೆತಿದ್ದು, ಹಂತಹಂತವಾಗಿ ಕಾಲಮಿತಿಯೊಳಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ