ಡಿಸಿಎಂಗೂ ಜೀರೋ ಟ್ರಾಫಿಕ್​; ಸುತ್ತೋಲೆ ಹೊರಡಿಸಿದ ಶಿಷ್ಟಾಚಾರ ವಿಭಾಗ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಲ್ಪಿಸುವ ರೀತಿಯಲ್ಲಿಯೇ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಅವರಿಗೂ ಜೀರೋ‌ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸಿಎಂಗೆ ಒದಗಿಸುವ ಶಿಷ್ಟಾಚಾರವನ್ನೇ ಯಥಾವತ್ತಾಗಿ ಒದಗಿಸಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ರಾಜ್ಯ ಶಿಷ್ಟಾಚಾರ ವಿಭಾಗದ ಉಪ ಕಾರ್ಯದರ್ಶಿಗಳಿಂದ ಸುತ್ತೋಲೆ ಹೊರಡಿಸಲಾಗಿದೆ.

ಇದು ಇಷ್ಟು ದಿನ ಜೀರೋ ಟ್ರಾಫಿಕ್ ಸಂಚಾರ ಬಯಸಿದ್ದ ಪರಮೇಶ್ವರ್ ಈಗ ಸಿಎಂಗೆ ಸಿಗುತ್ತಿರುವ ಎಲ್ಲಾ ಗೌರವ ಪಡೆಯಲು ಮುಂದಾದ್ರಾ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.
ನಗರದಲ್ಲಿ ಪ್ರತಿದಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಡಿಸಿಎಂಗೆ ಈವರೆಗೂ ಟ್ರಾಫಿಕ್ ಕ್ಲೀಯರ್ ಮಾಡಿ ಕೊಡಲಾಗುತ್ತಿತ್ತು. ಅಡೆತಡೆ ಇಲ್ಲದೇ ಅವರ ವಾಹನ ಬೆಂಗಾವಲು ಪಡೆ  ವಾಹನಗಳೊಂದಿಗೆ ಸಾಗುತ್ತಿತ್ತು. ಆದರೂ ಇದೀಗ ಇಡೀ ರಸ್ತೆಗಳ ಸಂಚಾರವನ್ನೇ ನಿರ್ಬಂಧಿಸುವ ರೀತಿಯ ಜೀರೋ ಟ್ರಾಫಿಕ್ ಸೌಲಭ್ಯ ಪಡೆದುಕೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿ ಮಾಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ