ಯಾವುದೇ ಶಾಸಕರು ತಮ್ಮ ವಿರುದ್ಧ ಸಮಾಧಾನ ವ್ಯಕ್ತಪಡಿಸಿಲ್ಲ – ಉಪಮುಖ್ಯಮಂತ್ರಿ ಜಿ.ಪರಮೇಶ್ವರ್

ಬೆಂಗಳೂರು,ಸೆ.26-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಸಮಾಧಾನಗೊಂಡಿದ್ದ ಶಾಸಕರ ನಡುವೆ ಆರೋಪ-ಪ್ರತ್ಯಾರೋಪ ಗಳು ನಡೆದ ನಡುವೆಯೇ ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಯಾವುದೇ ಶಾಸಕರು ತಮ್ಮ ವಿರುದ್ಧ ಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನಿನ್ನೆ ನಡೆದ ಸಿಎಲ್‍ಪಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಮಾಧಾನಗೊಂಡ ಕೆಲ ಶಾಸಕರಿಗೆ ಹಿತವಚನ ನೀಡಿರುವ ಜೊತೆಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಪರಸ್ಪರ ನಮ್ಮ ನಮ್ಮಲ್ಲಿ ಏನೇ ಇದ್ದರೂ ಬಹಿರಂಗ ಹೇಳಿಕೆಗಳನ್ನು ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರಬಾರದು. ಒಂದು ವೇಳೆ ಶಿಸ್ತು ಉಲ್ಲಂಘಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್‍ಗೆ ಶಿಫಾರಸು ಮಾಡಲಾಗುವುದು ಎಂಬ ಸೂಚನೆಯನ್ನು ಕೊಟ್ಟಿದ್ದರು ಎನ್ನಲಾಗಿತ್ತು.

ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರ ಹಾಕಿದರೆ ಬಂಗಾರಪೇಟೆಯ ಶಾಸಕ ನಾರಾಯಣಸ್ವಾಮಿ ಮುಖ್ಯಮಂತ್ರಿ ಕಾರ್ಯ ವೈಖರಿ ಕುರಿತಂತೆ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಶಾಸಕರು ಸಿಎಂ ಭೇಟಿಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ ಎಂದು ಆಕ್ಷೇಪಿಸಿದ್ದರು.

ಇಂದು ಈ ಬಗ್ಗೆ ಪರಮೇಶ್ವರ್ ಅವರು ಮಾತನಾಡಿ, ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಯವರ ಭೇಟಿಗೆ ಆಗುತ್ತಿರುವ ಅಡಚಣೆಯನ್ನು ತಿಳಿಸಿದ್ದಾರೆ. ಹಾಗಾಗಿ ನಮ್ಮ ಮೂಲಕ ಅವರನ್ನು ಸಂಪರ್ಕಿಸಲು ಸೂಚಿಸಿರುವುದಾಗಿ ಹೇಳಿದ್ದಾರೆ.
ಶಾಸಕ ಸುಧಾಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಡಾ.ಜಿ.ಪರಮೇಶ್ವರ್ ಅವರು ತರಾಟೆಗೆ ತೆಗೆದುಕೊಂಡಿರುವುದಲ್ಲದೆ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ.

ನಿನ್ನೆ ಸಭೆಯಲ್ಲಿ ಶಾಸಕರು ಹಾಗೂ ಪಕ್ಷದ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬಂದರೂ ಬಹಳ ಮುಕ್ತವಾಗಿ ಚರ್ಚಿಸಿದ್ದರಿಂದ ಸಾಕಷ್ಟು ಸಮಸ್ಯೆಗಳು ಶಮನವಾಗಿದೆ ಎಂದು ಹೇಳಲಾಗಿದೆ.
ಬಂಡಾಯದತ್ತ ಮುಖ ಮಾಡಿದ್ದ ಶಾಸಕರು ಸಹ ಸಮಾಧಾನಗೊಂಡಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಕೆಲಸ ನಿರ್ವಹಿಸುವಾಗ ವಿಳಂಬವಾದರೆ ಆ ವಿಚಾರವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯನವರ ಗಮನಕ್ಕೆ ತರುವಂತೆ ತಿಳಿಸಲಾಗಿದ್ದು, ಅವರ ಮುಂದಾಳತ್ವದಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸುವಂತೆ ಸೂಚಿಸಲಾಗಿದೆ.

ಅದನ್ನು ಬಿಟ್ಟು ಬಂಡಾಯವೆದ್ದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಬಾರದು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಹಾಗಾಗಿ ಕಾಂಗ್ರೆಸ್ ಒಳಜಗಳಗಳಿಂದ ಮುಕ್ತವಾಗಿ ಗೆಲ್ಲುವಿನತ್ತಲೇ ಎಲ್ಲರ ಕೇಂದ್ರಿಕೃತವಾಗಿರಬೇಕು. ಒಂದು ವೇಳೆ ಇಂತಹ ಅಸಮಾಧಾನದ ಹೊಗೆಯೇ ಪಕ್ಷಕ್ಕೆ ಮುಳುವಾದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‍ಗೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಪಕ್ಷ ನಿಷ್ಠೆಯಿಂದ ಅಸಮಾಧಾನ ತಲೆದೋರಂತೆ ಕೆಲಸ ನಿರ್ವಹಿಸಲು ಆದೇಶಿಸಲಾಗಿದೆ.
ಒಂದು ವೇಳೆ ಆಪರೇಷನ್ ಕಮಲಕ್ಕೆ ತುತ್ತಾಗಿ ಪಕ್ಷ ಬಿಟ್ಟರೂ ಅಲ್ಲೇನು ಉತ್ತಮವಾದ ವಾತಾವರಣ ಇಲ್ಲ. ಈ ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಪರಸ್ಪರ ಕಚ್ಚಾಡಿಕೊಂಡು ನಡೆಸಿದ ಆಡಳಿತವನ್ನುಎಲ್ಲರೂ ನೋಡಿದ್ದೀರಿ. ಹಾಗಾಗಿ ಎಚ್ಚರಿಕೆಯ ಹೆಜ್ಜೆ ಇಡಿ ಎಂದು ಹಿತವಚನವನ್ನು ಸಿದ್ಧರಾಮಯ್ಯ ಬೋಧಿಸಿದರೆ, ಕೆಲವರಿಗೆ ಬುದ್ದಿಯನ್ನೂ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ