ನವದೆಹಲಿ: ಆಧಾರ್ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಬುಧವಾರ ಅಂತಿಮ ತೀರ್ಪು ನೀಡಲಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಆಧಾರ್ ಕಾರ್ಡ್ ಮಾನ್ಯತೆ ಮತ್ತು ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯದ ಕುರಿತಾದ ಮಹತ್ವದ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ನೀಡಲಿದ್ದು, ಇದೀಗ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.
ವಿವಿಧ ಸಮಾಜ ಕಲ್ಯಾಣ ಯೋಜನೆಗಳು, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಫೋನ್ ಗೆ ಆಧಾರ್ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕೇಂದ್ರದ ಈ ಯೋಜನೆಯ ಭವಿಷ್ಯ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಿಂತಿದೆ.
ಆಧಾರ್ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೇರಿದಂತೆ 24 ಮಂದಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಸುದೀರ್ಘ ಅವಧಿಯವರೆಗೆ ವಿಚಾರಣೆ ನಡೆಸಿದ್ದು, ಮೇ ತಿಂಗಳಿನಲ್ಲಿ ತೀರ್ಪು ಕಾಯ್ದಿರಿಸಿತ್ತು. ಇದೀಗ ಇಂದು ಈ ಪ್ರಕರಣದ ಅಂತಿಮ ತೀರ್ಪು ಹೊರ ಬೀಳಲಿದೆ