ಬೆಂಗಳೂರು, ಸೆ.25- ಪಂಚಲೋಹ ಕೆತ್ತನೆ ಅತ್ಯಂತ ಕ್ಲಿಷ್ಟಕರ ಕಲೆ. ಇದೊಂದು ಸವಾಲಿನ ಕಲೆಯೂ ಹೌದು. ಆದರೆ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಲೋಹಶಿಲ್ಪಿ ಹೊನ್ನಪ್ಪ ಆಚಾರ್ ಪ್ರಪ್ರಥಮ ಬಾರಿಗೆ ಪಂಚಲೋಹದಲ್ಲಿ ಮುರಳಿ ಮೋಹನನ ವಿಗ್ರಹವನ್ನು ತಯಾರಿಸಿ ಅದರಲ್ಲಿ ಸಂಗೀತದ ನೀನಾದ ಹೊರಹೊಮ್ಮುವಂತೆ ಮಾಡಿದ್ದಾರೆ.
ಸುಮಾರು ಮೂರು ಕಾಲು ಅಡಿಯ 40 ರಿಂದ 50 ಕೆಜಿ ತೂಕದ ಈ ವಿಗ್ರಹವು ಶಿಲ್ಪಕಲೆಯ ಪ್ರಯೋಗದಲ್ಲಿ ವಿಶೇಷವೆಂದೇ ಹೇಳಬಹುದು. 6 ತಿಂಗಳು ಹಗುಲಿರುಳು ಕೆಲಸ ಮಾಡಿ ತಮ್ಮ ಕೈಚಳಕದಿಂದ ಈ ಸಂಗೀತ ಕೃಷ್ಣನನ್ನು ರೂಪಿಸಿದ್ದಾರೆ. ಈ ಮೂರ್ತಿ ರೂಪಿಸಲು ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ ಆಚಾರ್.
ನಾಡಿನ ಲೋಹಶಿಲ್ಪ ಪರಂಪರೆಯನ್ನು ಮುಂದುವರೆಸಲು ರಾಜ್ಯದ ಮೂಲೆಮೂಲೆಯಲ್ಲಿನ ಅತ್ಯಪರೂಪದ ಲೋಹಮೂರ್ತಿಯ 5 ಸಾವಿರಕ್ಕೂ ಅಧಿಕ ಮಾದರಿಗಳನ್ನು ಓಕಳಿಪುರದಲ್ಲಿನ ತಮ್ಮ ಮಾರುತಿ ಲೋಹಶಿಲ್ಪಾ ಕಲಾಕೇಂದ್ರದಲ್ಲಿ ರೂಪಿಸಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ತಮ್ಮ ಕಲಾಶ್ರೀಮಂತಿಕೆಯನ್ನು ಇದುವರೆಗೆ 200 ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ. ಹೊನ್ನಪ್ಪ ಆಚಾರ್ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ-ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ.
12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಈ ಬಾರಿ ಫೆಬ್ರವರಿ ತಿಂಗಳಲ್ಲಿ ನೆರವೇರಿತ್ತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಒಂದು ವಿಭಿನ್ನ ಸ್ಮರಣಿಕೆ ಮಾಡಿಕೊಡುವಂತೆ ಜೈನಮಠದಿಂದ ಹೊನ್ನಪ್ಪ ಆಚಾರ್ ಅವರಿಗೆ ಮನವಿ ಬಂದಿತ್ತು.
ಅಪರೂಪದ ಈ ಬೇಡಿಕೆಗೆ ಒಮ್ಮೆ ಬೆಚ್ಚಿ ಬಿದ್ದರೂ ಹೊನ್ನಪ್ಪ ಆಚಾರ್ ಅವರಲ್ಲಿದ್ದ ಕಲಾಚೈತನ್ಯ ಅದನ್ನು ಯಶಸ್ವಿಯಾಗಿ ಮಾಡುವಂತೆ ಪ್ರೇರೇಪಿಸಿತು. ಇಡೀ ವಿಂಧ್ಯಗಿರಿ ಬೆಟ್ಟವನ್ನೇ ಹೆಲಿಕಾಪ್ಟರ್ನಿಂದ ಸುದೀರ್ಘವಾಗಿ ಫೆÇೀಟೋ ತೆಗೆಸಿ ವಿಂಧ್ಯಗಿರಿಯ ಮಾದರಿಯನ್ನೇ 25 ಕೆಜಿಯ ಪಂಚಲೋಹದಲ್ಲಿ ಸ್ಮರಣಿಕೆ ಸಿದ್ಧಪಡಿಸಿದರು. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಈ ವಿಶೇಷ ಕಲಾಕೃತಿಯನ್ನು ಸಂಘಟಕರು ರಾಷ್ಟ್ರಪತಿ ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಸದ್ಯ ಈ ಸ್ಮರಣಿಕೆ ರಾಷ್ಟ್ರಪತಿ ಭವನದಲ್ಲಿಡಲಾಗಿದೆ. ಹಂಪಿ ವಿವಿ ನೀಡುವ ನಾಡೋಜ ಪ್ರಶಸ್ತಿಯ ಸ್ಮರಣಿಕೆಗಳು ಇವರ ಕಲಾ ಕೇಂದ್ರದಲ್ಲಿ ರೂಪುಗೊಂಡವು. ಇಂತಹ ನೂರಾರು ಕಲಾಕೃತಿಗಳು ಹೊನ್ನಪ್ಪಆಚಾರ್ ಕೈಯಲ್ಲಿರಳಿವೆ.
ಶ್ರೇಷ್ಠ ಕಲಾವಿದ ಹೊನ್ನಪ್ಪ ಆಚಾರ್ ಅವರ ಕೈಯಲ್ಲಿ ಇನ್ನಷ್ಟು ಅದ್ಭುತ ಕಲಾಕೃತಿಗಳು ರೂಪುಗೊಂಡು ಕಲಾಪ್ರೇಮಿಗಳ ಮನ ತಣಿಸಲಿ ಎಂಬುದೇ ನಮ್ಮ ಆಶಯ.