ಬಿಡಿಎ 4971 ನಿವೇಶನಗಳ ಹಂಚಿಕೆ ಲಾಟರಿ ಪ್ರಕ್ರಿಯೆಗೆ ಸಿಎಂ ಚಾಲನೆ

ಬೆಂಗಳೂರು, ಸೆ.25- ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 4971 ನಿವೇಶನಗಳ ಹಂಚಿಕೆ ಲಾಟರಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.
ಇಂದು ಕೃಷ್ಣಾದಲ್ಲಿ ಆನ್‍ಲೈನ್ ಲಾಟರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ, ಬೆಂಗಳೂರಿನ ನಿವಾಸಿಗಳಿಗೆ ಶೀಘ್ರವೇ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ 4043.27 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಇದುವರೆಗೂ 2383.11 ಎಕರೆ ಜಮೀನನ್ನು ಬಿಡಿಎಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ 2016-17ರಲ್ಲಿ 5 ಸಾವಿರ ನಿವೇಶನ ನಿರ್ಮಿಸಿ ಹಂಚಿಕೆ ಮಾಡಲಾಗಿದೆ ಎಂದರು.
ಎರಡನೆ ಹಂತದಲ್ಲಿ 4971 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಇಂದು ಅವುಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದುವರೆಗೂ ಸುಮಾರು 17,920 ಸೈಟುಗಳನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಭೂ ಮಾಲೀಕರಿಗೆ 7600 ನಿವೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನಕ್ಕಾಗಿ 15,120 ಅರ್ಜಿಗಳು ಸಲ್ಲಿಕೆಯಾಗಿದ್ದವು. 5 ಸಾವಿರ ಮಂದಿಗೆ ನಿವೇಶನ ಹಂಚುತ್ತಿದ್ದೇವೆ. ನಿವೇಶನ ಸಿಗದಿದ್ದವರಿಗೆ ತಿಂಗಳೊಳಗೆ ಠೇವಣಿ ಹಣ ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು.
ನಿವೇಶನ ಪಡೆದವರು ಎರಡು ತಿಂಗಳ ಒಳಗಾಗಿ ಬಿಡಿಎಗೆ ಸಂಪೂರ್ಣ ಹಣ ಪಾವತಿಸಬೇಕು. ಒಂದು ವೇಳೆ ವಿಫಲರಾದರೆ ಆನಂತರ ಮೂರು ತಿಂಗಳ ಕಾಲಾವಕಾಶ ನೀಡುತ್ತಿದ್ದು, ಅದಕ್ಕೆ ಶೇ.18 ಮತ್ತು ಶೇ.21ರ ಪ್ರಮಾಣದಲ್ಲಿ ಬಡ್ಡಿದರ ವಿಧಿಸಲಾಗುವುದು ಎಂದು ಅವರು ಹೇಳಿದರು.

ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ನಿವೇಶನದ ಹಣ ಪಾವತಿಸಲು ಮೂರು ವರ್ಷದವರೆಗೂ ಕಾಲಾವಕಾಶ ನೀಡಲಾಗುವುದು ಎಂದರು.
ನಿರ್ಮಾಣ ಮಾಡಿರುವ ನಿವೇಶನಗಳ ಪೈಕಿ ಶೇ.20ರಷ್ಟನ್ನು ಆರ್ಥಿಕವಾಗಿ ದುರ್ಬಲಗೊಂಡವರಿಗೆ ನೀಡಲಾಗುತ್ತಿದ್ದು, ಅದರಲ್ಲಿ ಶೇ.50ರಷ್ಟು ಮೂಲ ಬೆಲೆಯ ರಿಯಾಯಿತಿ ನೀಡಲಾಗುತ್ತದೆ ಎಂದರು.

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯಿಂದ ಉತ್ತಮ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ನಿವೇಶನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಸಾಲಮೇಳ ನಡೆಸಲು ಬ್ಯಾಂಕ್‍ಗಳಿಗೆ ಸಲಹೆ ನೀಡಲಾಗುವುದು ಎಂದ ಅವರು, ಕೆಂಪೇಗೌಡ ಬಡಾವಣೆಯ ಮೂಲ ಸೌಲಭ್ಯಕ್ಕಾಗಿ ಸುಮಾರು 2770 ಕೋಟಿ ರೂ. ಖರ್ಚಾಗುತ್ತದೆ. ಎರಡನೆ ಹಂತದ ನಿವೇಶನಗಳ ಮಾರಾಟದಿಂದ ಸುಮಾರು 1400 ಕೋಟಿ ರೂ. ಹಣ ಲಭ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಬಂಡೆಪ್ಪ ಕಾಶಂಪೂರ್, ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಎಂ.ಟಿ.ಬಿ.ನಾಗರಾಜ್, ಬಿಡಿಎ ಆಯುಕ್ತ ರಾಕೇಶ್‍ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ