ಬೆಂಗಳೂರು, ಸೆ.24-ವಿಧಾನಪರಿಷತ್ಗೆ ನಾಮಕರಣ ಸದಸ್ಯರನ್ನು ನೇಮಕ ಮಾಡುವಾಗ ಕನ್ನಡ ಪರ ಹೋರಾಟಗಾರರನ್ನು ಪರಿಗಣಿಸಬೇಕು, ನಾಡು, ನುಡಿ, ನೆಲ-ಜಲ, ಸಂಸ್ಕøತಿ ಉಳಿವಿಗಾಗಿ ಅಹರ್ನಿಶಿ ಶ್ರಮಿಸಿದವರನ್ನು ಮೇಲ್ಮನೆಗೆ ನೇಮಕ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಮೂಲಕ ಕನ್ನಡ ಸೇವೆಯನ್ನು ಮಾಡುತ್ತಿರುವ ಸಾ.ರಾ.ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ನಾಡು ಕಟ್ಟುವ ಕಾಯಕದಲ್ಲಿ ತೊಡಗಿರುವ ನಾರಾಯಣಗೌಡ, ಪ್ರವೀಣ್ಕುಮಾರ್ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್, ಸಾರ್ವಜನಿಕ ಜಾಗೃತಿ ವೇದಿಕೆಯ ಮಂಜುನಾಥ್ದೇವ್, ಬೆಳಗಾವಿಯ ಕನ್ನಡ ಪರ ಹೋರಾಟಗಾರ ಸಿದ್ಧನಗೌಡ ಪಾಟೀಲ್ ಸೇರಿದಂತೆ ಸಾಕಷ್ಟು ಕನ್ನಡ ಹೋರಾಟಗಾರರು ಇದ್ದಾರೆ. ಇವರಲ್ಲಿ ಯಾರನ್ನಾದರೂ ವಿಧಾನಪರಿಷತ್ಗೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಸಾಹಿತಿಗಳು, ಕಲಾವಿದರು, ಕನ್ನಡಪರ ಹೋರಾಟಗಾರರನ್ನು ಪರಿಷತ್ಗೆ ನಾಮಕರಣ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಾಮಕರಣ ವ್ಯಾಪಾರೀಕರಣವಾಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ. ನಾಡು, ನುಡಿಗಾಗಿ ಸೇವೆ ಮಾಡಿದವರು ವಿಧಾನಪರಿಷತ್ನಲ್ಲಿ ಕಡಿಮೆಯಾಗುತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಟೀಲು ಚೌಡಯ್ಯ, ಗುಬ್ಬಿ ವೀರಣ್ಣ, ಬಿ.ಜಯಮ್ಮ, ಎಂ.ಸಿ.ಮಹದೇವಸ್ವಾಮಿ, ಡಾ.ಚಂದ್ರಶೇಖರ ಕಂಬಾರ, ಡಾ.ಸಿದ್ದಲಿಂಗಯ್ಯ ಸೇರಿದಂತೆ ಅನೇಕರನ್ನು ನೇಮಿಸಲಾಗಿತ್ತು.
ಪ್ರಾಮಾಣಿಕವಾಗಿ ಹೋರಾಟ ಮಾಡಿರುವವರನ್ನು ನಾಡು, ನುಡಿ ಸೇವೆ ಮಾಡಿರುವವರನ್ನು ಹೊರತುಪಡಿಸಿ ಇತ್ತೀಚೆಗೆ ಆಳುವ ಪಕ್ಷದವರನ್ನೇ ನೇಮಕ ಮಾಡುವ ಪರಿಪಾಠ ಮುಂದುವರೆದಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಜಾತ್ಯತೀತವಾಗಿ ಚಿಂತನೆ ಮಾಡಿ ಹೋರಾಟಗಾರರಿಗೂ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಕಳೆದ 55 ವರ್ಷಗಳಿಂದ ರಾಜಕಾರಣದಲ್ಲಿದ್ದು, ಐದು ಬಾರಿ ವಿಧಾನಸಭೆ ಸದಸ್ಯನಾಗಿದ್ದೇನೆ. ನಿರಂತರವಾಗಿ ಹೋರಾಟದ ಮೂಲಕ ಕನ್ನಡದ ಕಾಯಕ ಮಾಡುತ್ತಿದ್ದೇನೆ. ಇತ್ತೀಚೆಗೆ ನಡೆಯುತ್ತಿರುವ ಸದಸ್ಯರ ನೇಮಕ ಮಾನದಂಡಗಳು ತೀವ್ರ ಬೇಸರ ತರಿಸಿದೆ ಎಂದ ವಾಟಾಳ್, ಪ್ರಾಮಾಣಿಕರನ್ನು, ಹೋರಾಟಗಾರರನ್ನು ಪರಿಗಣಿಸಬೇಕೆಂದು ಆಗ್ರಹಿಸಿ ಇದೇ 26 ರಂದು ರಾಜಭವನದ ಎದುರು ಹೋರಾಟ ನಡೆಸಲಾಗುವುದು ಹಾಗೂ ಕಾನೂನು ಹೋರಾಟ ಕೂಡ ನಡೆಸುವುದಾಗಿ ಅವರು ಹೇಳಿದರು.