ಬೆಂಗಳೂರು, ಸೆ.24-ಇದೇ 28 ರಂದು ನಡೆಯಲಿರುವ ಮೇಯರ್ ಚುನಾವಣೆಗೆ ಬಿಬಿಎಂಪಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ವಿಧಾನಪರಿಷತ್ನ ಮೂವರು ಹಾಗೂ ರಾಜ್ಯಸಭಾ ಸದಸ್ಯರೊಬ್ಬರಿಗೆ ಮತದಾನದ ಹಕ್ಕು ನೀಡಬಾರದೆಂದು ಬಿಜೆಪಿ, ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದೆ.
ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ಶಂಕರ್ ಅವರು ಇಂದು ಮೇಯರ್ ಚುನಾವಣೆ ಆಯ್ಕೆಯ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು.
ಮತದಾನದ ಪ್ರಕ್ರಿಯೆಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಚುನಾವಣಾ ಸಿದ್ಧತೆ, ಭದ್ರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು, ರಾಜ್ಯಸಭಾ ಸದಸ್ಯರಾದ ಜಯರಾಮ್ ರಮೇಶ್, ವಿಧಾನಪರಿಷತ್ ಸದಸ್ಯರಾದ ಉಗ್ರಪ್ಪ, ರಘುಆಚಾರ್, ಸಿ.ಆರ್.ಮನೋಹರ್ ಈ ನಾಲ್ವರಿಗೆÉ ಮತದಾನ ಹಕ್ಕು ನೀಡಬಾರದು, ಮತ ಚಲಾಯಿಸಲು ಅವಕಾಶ ಕೊಟ್ಟರೆ ಕಾಯ್ದೆ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಇವರು ಆಯ್ಕೆಯಾದ ಕ್ಷೇತ್ರಗಳಲ್ಲಿ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ಅಲ್ಲಿನ ಮತದಾರರಿಗೆ ಅನ್ಯಾಯವೆಸಗುತ್ತಿದ್ದಾರೆ. ಇಲ್ಲಿ ಮತದಾನ ಮಾಡುವ ಮೂಲಕ ಇವರಿಗೆ ಮತ ಹಾಕಿದ ಮೂಲ ನಿವಾಸಿಗಳಿಗೆ ವಂಚಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಮತದಾನದ ಹಕ್ಕು ನೀಡಬಾರದೆಂದು ಮನವಿ ಮಾಡಿದರು.
ಇವರ ಮನವಿ ಆಲಿಸಿದ ಆಯುಕ್ತರು, ಈ ಸಂಬಂಧ ಲಿಖಿತ ದೂರು ಕೊಡಿ. ಅದನ್ನು ಬಿಬಿಎಂಪಿ ಆಯುಕ್ತರಿಗೆ ಕಳುಹಿಸಲಾಗುವುದು. ಅವರು ತೆಗೆದುಕೊಳ್ಳುವ ತೀರ್ಮಾನದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಬಿಜೆಪಿ 100 ಸದಸ್ಯ ಬಲ ಹೊಂದಿದೆ. 75 ಸದಸ್ಯ ಬಲವಿರುವ ಕಾಂಗ್ರೆಸ್, 15 ಸದಸ್ಯ ಬಲವಿರುವ ಜೆಡಿಎಸ್, ಪಕ್ಷೇತರರು ಮತ್ತು ರಾಜ್ಯಸಭಾ, ವಿಧಾನಪರಿಷತ್ ಸದಸ್ಯರ ಬೆಂಬಲ ಪಡೆದು ಅನೈತಿಕ ಮೈತ್ರಿಯೊಂದಿಗೆ ಮತ್ತೆ ಮೇಯರ್ ಗದ್ದುಗೆಗೇರುವ ಪ್ರಯತ್ನ ನಡೆಸುತ್ತಿದೆ. ಈ ವಿರುದ್ಧ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಿದ್ದೇವೆ. ಅವರು ಸೂಕ್ತ ಕ್ರಮಕೈಗೊಳ್ಳದಿದ್ದರೆ, ಕಾನೂನು ಹೋರಾಟ ನಡೆಸುವುದಾಗಿ ರೆಡ್ಡಿ ಎಚ್ಚರಿಸಿದ್ದಾರೆ.