ಬಡ್ತಿ ಮೀಸಲಾತಿ 2017ರ ಕಾಯ್ದೆ ಶೀಘ್ರವೇ ಜಾರಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆ.24- ರಾಷ್ಟ್ರಪತಿಯವರಿಂದ ಅಂಗೀಕಾರಗೊಂಡಿರುವ ಬಡ್ತಿ ಮೀಸಲಾತಿ 2017ರ ಕಾಯ್ದೆ ಶೀಘ್ರವೇ ಜಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದಲ್ಲಿರುವ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕಾಯ್ದೆಯಲ್ಲಿ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಿಸಬೇಕಿದೆ. ಆ ಸಲುವಾಗಿಯೇ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿತ್ತು. ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ. ಕಾಯ್ದೆ ಜಾರಿಗೆ ಕೆಲವು ತೊಡಕುಗಳಿದ್ದವು. ಅವುಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಿದ್ದೇವೆ ಎಂದರು.

ಬಡ್ತಿ ಮೀಸಲಾತಿ ಕಾಯ್ದೆ ಜಾರಿಯಾಗದೇ ಇರುವ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರಂತೆ ನಮಗೂ ಕೂಡ ಬೇಜಾರಾಗಿದೆ. ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡಿದ್ದೇವೆ. ಇಂದು ನಾನು ಮತ್ತು ಪ್ರಿಯಾಂಕ ಖರ್ಗೆ ಆ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮಾಡಿದ್ದೇವೆ. ರಾಷ್ಟ್ರಪತಿಯವರಿಂದ ಅಂಗೀಕಾರಗೊಂಡಿರುವ ಕಾಯ್ದೆ ಇಂದು ಅಥವಾ ನಾಳೆ ಜಾರಿಯಾಗಬಹುದು. ಶೀಘ್ರವೇ ಇದನ್ನು ಇತ್ಯರ್ಥಗೊಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಗುಂಡಿ ಮುಚ್ಚಲು ನಿರಂತರ ಪ್ರಕ್ರಿಯೆ :
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವುದು ನಿರಂತರವಾಗಿ ನಡೆಯುತ್ತಲೇ ಇದೆ. ಮಳೆಗಾಲದಲ್ಲಿ ಸ್ವಲ್ಪ ರಸ್ತೆ ಗುಂಡಿಗಳು ಹೆಚ್ಚಾಗುತ್ತವೆ. ಈ ವಿಷಯವಾಗಿ ಹೈಕೋರ್ಟ್ ಮುಖ್ಯನ್ಯಾಯಾಧೀಶರು ಇತ್ತೀಚೆಗೆ ಸ್ಪಷ್ಟ ಆದೇಶವನ್ನೂ ನೀಡಿದ್ದಾರೆ. ಅದನ್ನು ನಾವು ಪಾಲಿಸುತ್ತಿದ್ದೇವೆ. ಬಹಳಷ್ಟು ಕಡೆ ಗುಂಡಿಗಳನ್ನು ಮುಚ್ಚಲಾಗಿದೆ. ನಿನ್ನೆ ರಾತ್ರಿ ಹೆಚ್ಚು ಮಳೆ ಸುರಿದಿರುವುದರಿಂದ ಮತ್ತಷ್ಟು ಗುಂಡಿಗಳು ಹೆಚ್ಚಾಗಿವೆ. ಗುಂಡಿಗಳನ್ನು ಎಣಿಸಿಕೊಂಡು ಮುಚ್ಚಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಕಂಡುಬರುವ ಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದರು.

ತಾರತಮ್ಯವಾಗಿಲ್ಲ:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಸುಳ್ಳು. ನನಗೆ ತಿಳಿದ ಮಟ್ಟಿಗೆ ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.

ಬಿಜೆಪಿಗೆ ಅಧಿಕಾರ ದಾಹ:
ಬಿಜೆಪಿಯವರು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಎರಡು ಬಾರಿ ಅಧಿಕಾರದ ರುಚಿ ನೋಡಿದ ಇವರಿಗೆ ಅಧಿಕಾರದ ದಾಹ ಇದೆ. ಹಾಗಾಗಿ ಅವರು ಸುಮ್ಮನೆ ಕೂರಲು ಸಾಧ್ಯವಾಗುತ್ತಿಲ್ಲ. ಅವರು ಪ್ರಯತ್ನಗಳು ಮುಂದುವರೆಸುತ್ತಲೇ ಇದ್ದಾರೆ. ಆದರೂ ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದು ಹೇಳಿದರು.
ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಎಲ್ಲರೂ ಒಟ್ಟಾಗಿದ್ದಾರೆ. ಕೆಲವು ಶಾಸಕರು ದೇವಸ್ಥಾನಗಳಿಗೆ ಹೋಗಿದ್ದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಶಾಸಕರಾದ ಎಂ.ಬಿ.ಟಿ.ನಾಗರಾಜು, ಡಾ.ಸುಧಾಕರ್ ಅವರಲ್ಲಿ ಅಸಮಾಧಾನ ಇರುವುದು ನಿಜ. ಅವರ ಕ್ಷೇತ್ರಗಳಲ್ಲಿ ಸಾರ್ವಜನಿಕರ ಕೆಲಸಗಳು ಆಗಿಲ್ಲ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಸರ್ಕಾರದ ಪರವಾಗಿ ಅವರ ಜತೆ ನಾನು ಮಾತನಾಡಿದ್ದೇನೆ. ಅವರ ಕ್ಷೇತ್ರದ ಎಲ್ಲಾ ಕೆಲಸಗಳನ್ನು ಕಾಲ ಮಿತಿಯಲ್ಲಿ ಮಾಡಿಕೊಡುತ್ತೇವೆ ಎಂದರು.
ಸಣ್ಣಪುಟ್ಟ ಅಸಮಾಧಾನಗಳನ್ನು ಬಗೆಹರಿಸುತ್ತೇವೆ. ಇನ್ನು ಎರಡು-ಮೂರು ಬಾರಿ ಶಾಸಕರಾಗಿರುವವರಿಗೆ ಸಚಿವರಾಗಬೇಕೆಂಬ ಆಸೆ ಸಹಜ. ಯಾರಿಗೇ ಆದರೂ ಇಂತಹ ಆಸೆಗಳು ಇದ್ದೇ ಇರುತ್ತವೆ. ಅದನ್ನು ತಪ್ಪು ಎನ್ನಲು ಆಗುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ