ನವದೆಹಲಿ, ಮಾ.4- ಬಜೆಟ್ನ ಮುಂದುವರಿದ ಸಂಸತ್ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಆಡಳಿತಾರೂಢ ಕೇಂದ್ರ ಸರ್ಕಾರ ಸಂತುಷ್ಟಗೊಂಡಿದ್ದರೆ, ಪಿಎನ್ಬಿ ಬ್ಯಾಂಕ್ ಸೇರಿದಂತೆ ವಿವಿಧ ಬಹುಕೋಟಿ ಹಗರಣಗಳ ವಿಷಯಗಳನ್ನು ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ಮೇಲಿನ ದಾಳಿಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಜ್ಜಾಗಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ನ 12,723 ಕೋಟಿ ರೂ. ಹಗರಣ, ರೋಟೋಮ್ಯಾಕ್ ಪೆನ್ ಕಂಪೆನಿ ವಂಚನೆ ಪ್ರಕರಣ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರವನ್ನೇ ಬೆಚ್ಚಿಬೀಳಿಸಿರುವ ವಿವಾದಗಳು ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆಯಿದೆ.
ಆರ್ಥಿಕ ಅಪರಾಧಿಗಳ ಸ್ವತ್ತು-ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆರ್ಥಿಕ ಅಪರಾಧಿಗಳ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ಬೆನ್ನಲ್ಲೆ ನಡೆಯುತ್ತಿರುವ ಸಂಸತ್ ಅಧಿವೇಶನ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.
ಪಿಎನ್ಬಿ ಹಗರಣ ಡಾ.ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದಿತ್ತು ಎಂಬುದು ಬಿಜೆಪಿಯ ಆರೋಪವಾದರೆ ಮೋದಿ ಆಡಳಿತದಲ್ಲಿ ದೊಡ್ಡ ಮಟ್ಟದ ಬ್ಯಾಂಕಿಂಗ್ ಹಗರಣಗಳು ನಡೆಯುತ್ತಿವೆ ಎಂಬುದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಆಪಾದನೆಯಾಗಿದೆ. ಈ ವಿಷಯ ಸಂಸತ್ನ ಉಭಯ ಸದನಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ ಪರಸ್ಪರ ವಾದ-ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಲಿರುವ ಬಜೆಟ್ನ ಮುಂದುವರಿದ ಅಧಿವೇಶನದ ಕಲಾಪಗಳನ್ನು ಈ ಹಗರಣಗಳು ಮತ್ತು ವಿವಾದಗಳು ಬಲಿ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದು, ವಿಪಕ್ಷಗಳ ಪ್ರತಿಭಟನೆಯನ್ನು ನಿಗ್ರಹಿಸಲು ಆಡಳಿತಾರೂಢ ಬಿಜೆಪಿ ಪ್ರತಿತಂತ್ರ ಹೆಣೆದಿದೆ.
ಮುಂದುವರಿದ ಬಜೆಟ್ ಅಧಿವೇಶದಲ್ಲಿ ಹಲವಾರು ಮಹತ್ವದ ವಿಧೇಯಕಗಳಿಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಬಜೆಟ್ನಲ್ಲಿ ನೀಡಲಾದ ಅನುಮೋದನೆಗಳು ಮತ್ತು ವಿವಿಧ ಯೋಜನೆಗಳ ಕುರಿತು ಉಭಯ ಸದನಗಳಲ್ಲಿ ಚರ್ಚೆಯಾಗಲಿದೆ.
ವಿವಾದಿತ ತ್ರಿವಳಿ ತಲಾಕ್ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನ ಮುಂದುವರಿಸಲಿದೆ. ಕೃಷಿಕರ ಬವಣೆ, ರೈತರ ಆತ್ಮಹತ್ಯೆ, ಜಿಎಸ್ಟಿ, ಜಲ ವಿವಾದಗಳು, ನಿರುದ್ಯೋಗ ಸಮಸ್ಯೆ, ಕೋಮು ಗಲಭೆ, ಕಾಶ್ಮೀರದಲ್ಲಿ ಉಗ್ರರ ಉಪಟಳ, ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾದ ಪುಂಡಾಟ ಸೇರಿದಂತೆ ಅನೇಕ ವಿಷಯಗಳು ಈ ಅಧಿವೇಶನದಲ್ಲಿ ಪ್ರಸ್ತಾಪವಾಗಿ ಗದ್ದಲದ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಒಟ್ಟಾರೆ ನಾಳೆಯಿಂದ ಆರಂಭವಾಗುವ ಸಂಸತ್ನ ಬಜೆಟ್ ಅಧಿವೇಶನ ಕದನ ಕೌತುಕ ವಾತಾವರಣ ಸೃಷ್ಟಿಸುವ ನಿರೀಕ್ಷೆ ಇದೆ. ನಾಳೆಯಿಂದ ನಡೆಯಲಿರುವ ಸಂಸತ್ ಅಧಿವೇಶನವು ಎರಡನೆ ಭಾಗ. ಮೊದಲ ಭಾಗವು ಫೆ.1ರಿಂದ ಆರಂಭವಾಗಿ 15 ದಿನಗಳ ಕಾಲ ನಡೆದಿತ್ತು. ಫೆ.1ರಂದು ರಾಷ್ಟ್ರಪತಿ ರಮಾನಾಥ ಕೋವಿಂದ್ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದರು. ಎರಡನೆ ಭಾಗವು ಮಾ.5ರಿಂದ ಆರಂಭವಾಗಿ ಏ.6ರವರೆಗೆ ನಡೆಯಲಿದೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಒಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಸುಗಮ ಮತ್ತು ಸುಸೂತ್ರ ಕಲಾಪಕ್ಕೆ ಪ್ರತಿಪಕ್ಷದ ಮುಖಂಡರಲ್ಲಿ ಮನವಿ ಮಾಡಲಿದ್ದಾರೆ.