ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಹಾಗೂ ಅವರ ತಂಡಕ್ಕೆ 8ನೇ ಎಸಿಎಂಎಂ ನ್ಯಾಯಾಲಯ ನಿನ್ನೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ಈ ಸಂಬಂಧ ದುನಿಯಾ ವಿಜಯ್, ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ಕೋಚ್ ಮಣಿ ಸದ್ಯಕ್ಕೆ ಪರಪ್ಪನ ಅಗ್ರಹಾರದ ಸೆರೆ ವಾಸದಲ್ಲಿದ್ದಾರೆ. ದುನಿಯಾ ವಿಜಯ್ ಮತ್ತವರ ತಂಡವನ್ನು ಒಂದೇ ರೂಂನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಇಂದು ವೈದ್ಯಕೀಯ ಪರೀಕ್ಷೆ ನಡೆಸಿ, ಬಳಿಕ ಫೋಟೋ ತೆಗೆಸಿ ವಿಚಾರಣಾಧೀನ ಕೈದಿ ನಂಬರ್ ನೀಡಲಾಗುತ್ತದೆ. ನಂತರವಷ್ಟೇ ವಿಚಾರಣಾಧೀನ ಕೈದಿಗಳ ರೂಂಗೆ ವಿಜಯ್ ಹಾಗೂ ಟೀಮನ್ನು ಶಿಫ್ಟ್ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪರಪ್ಪನ ಅಗ್ರಹಾರದಲ್ಲಿ ವಿಜಯ್ ರಾತ್ರಿ ನಿದ್ರಿಸದೆ ಚಿಂತೆ ಮಾಡಿದ್ದಾರೆ ಎಂದು ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಾನು ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದವನು. ತನ್ನನ್ನು ತುಳಿಯುವ ಸಲುವಾಗಿ ಕೆಲವರು ಕುತಂತ್ರ ಮಾಡಿ ಈ ಬಲೆಯಲ್ಲಿ ಸಿಲುಕಿಸಿದ್ದಾರೆ. ಸತ್ಯಕ್ಕೆ ನ್ಯಾಯ ದೊರೆಯುತ್ತದೆ ಎಂದು ಜೈಲು ಸಿಬ್ಬಂದಿ ಬಳಿ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯ್ ಜೈಲು ಸಿಬ್ಬಂದಿಗೆ ಸಿಗರೇಟ್ ಕೇಳಿದ್ದಾರೆ ಎನ್ನಲಾಗಿದ್ದು ಸಿಬ್ಬಂದಿ ಇದಕ್ಕೆ ನಿರಾಕರಿಸಿದ್ದಾರೆ. ರಾತ್ರಿಯೆಲ್ಲಾ ಎಚ್ಚರವಿದ್ದ ವಿಜಯ್ ಬೆಳಗ್ಗೆ 4 ಗಂಟೆಗೆ ಮಲಗಿ 6.30ಕ್ಕೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ್ದಾರೆ. 7 ಗಂಟೆಗೆ ಜೈಲಿನ ಮೆನುವಿನಂತೆ ಪುಳಿಯೋಗರೆ ಹಾಗೂ ಟೀ ಸೇವಿಸಿದ್ದಾರೆ.
ವಿಜಯ್ ತಾನು ಜೈಲಿನಲ್ಲಿರುವುದಕ್ಕಿಂತ ಹೆಚ್ಚಾಗಿ ಮೊದಲನೆ, ಎರಡನೆ ಪತ್ನಿಯರ ಜಗಳದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ ಮೇಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ವಿಜಯ್ ತಲೆಬಿಸಿಗೆ ಕಾರಣವಾಗಿದ್ದು ಇದೇ ವಿಚಾರವಾಗಿ ವಿಜಯ್ ತಲೆಕೆಡಿಸಿಕೊಂಡಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.