ಬೆಂಗಳೂರು, ಸೆ.23- ಸಿಲಿಕಾನ್ ಸಿಟಿಯಲ್ಲಿ ಈಗ ಮೇಳಗಳ ಪರ್ವ. ಸಾರ್ವಜನಿಕರನ್ನು ಆಕರ್ಷಿಸಲು ಹೊವರ್ಡ್ ಜಾನ್ಸನ್ ಹೆಬ್ಬಾಳ ಹೋಟೆಲ್ನಲ್ಲಿ ಭಾರತೀಯ ಆಹಾರ ಪಾಕಶಾಲಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿರುವ ಮುಖ್ಯ ಬಾಣಸಿಗ ಮಣೆ ಮೋಹನ್ ಪಾಠಕ್ಅವರ ನೇತೃತ್ವದಲ್ಲಿ ನಮ್ಮ ಹೋಜೋ – ನಮ್ಮ ಕರ್ನಾಟಕದ ಊಟ ಎಂಬ ಹೆಸರಿನಲ್ಲಿ ಆಹಾರ ಮೇಳವನ್ನು ಏರ್ಪಡಿಸಿದೆ.
ಪ್ರತಿ ಮಂಗಳವಾರ ಹೋಟೆಲ್ನಲ್ಲಿ ನಡೆಯುವ ಆಹಾರ ಮೇಳದಲ್ಲಿ ಕರ್ನಾಟಕದ ವಿವಿಧ ಖಾದ್ಯಗಳಾದ ರಾಗಿ ಮುದ್ದೆ ಸೋಪ್ಪುಸಾಂಬರ್, ರಾಗಿ ದೋಸೆ, ಬೆಣ್ಣೆ ದೋಸೆ, ಮೈಸೂರು ಮಸಾಲೆ ದೋಸೆ ಜೊತೆಗೆ ರುಚಿಕರ ಸಾಂಬರ್ ನೊಂದಿಗೆ ವಿವಿಧ ಬಗೆಯ ಚಟ್ನಿಗಳನ್ನು ನೀಡಲಾಗುತ್ತಿದೆ.
ಇದರೊಂದಿಗೆ ಮಸಾಲ ವಡೆ, ಅಲೂ ಬೋಂಡಾ, ಮದ್ದೂರು ವಡೆಯನ್ನು ಸವಿಯ ಬಹುದಾಗಿದೆ. ಬಿಸಿಬೆಳೆ ಬಾತ್, ಚಿತ್ರಾನ್ನ, ಮೋಸರನ್ನ, ಅನ್ನ ಸಾಂಬರ್, ಮಜ್ಜಿಗೆ ಸೇರಿದಂತೆ ಹಲವು ರೀತಿಯ ಸಸ್ಯಹಾರಿ ತಿನಿಸುಗಳು ಇರಲಿವೆ. ಅಲ್ಲದೇ ಚಿಕನ್ ಮತ್ತು ಮಟನ್ ಗೀ ರೋಸ್ಟ್, ಮಟನ್ ಬಿರಿಯಾನಿ, ಫಿಶ್ ಫ್ರೈ ನಂತಹ ಮಾಂಸಹಾರಿ ಖಾದ್ಯಗಳನ್ನು ಸವಿಯಬಹುದು.
ಇಷ್ಟೇ ಅಲ್ಲದೇ ಹೋಳಿಗೆ, ಮೈಸೂರು ಪಾಕ್, ಧಾರವಾಡ ಪೇಡ, ಕೇಸರಿ ಬಾತ್, ಪಾಯಸ, ರವಾ ಕೇಸರಿ, ಚಿರೋಟಿ ಬಾದಾಮಿ ಹಾಲುಮೊದಲಾದ ಖಾದ್ಯಗಳು ಭೋಜನಾ ಪ್ರಿಯರಿಗೆ ಹಬ್ಬದೂಟ ನೀಡಲಿದೆ.
ಸಾಮಾನ್ಯ ಹೋಟೆಲ್ಗಳಿಗೆ ಮಾತ್ರ ಸೀಮಿತವಾಗಿರುವ ನಮ್ಮ ಕರ್ನಾಟಕ ಶೈಲಿಯ ವಿವಿಧ ಖಾದ್ಯಗಳನ್ನು ಪಂಚಾತಾರ ಹೋಟೆಲ್ಗಳಲ್ಲಿ ತಯಾರಿಸಿ ಪ್ರಾದೇಶಿಕ ಖಾದ್ಯಗಳನ್ನು ದೇಶ-ವಿದೇಶದ ಖಾದ್ಯ ಪ್ರಿಯರಿಗೂ ದೊರಕಬೇಕು ಎಂಬ ಉದ್ದೇಶದಿಂದ ಈ ಮೇಳವನ್ನುಹಮ್ಮಿಕೊಳ್ಳಲಾಗಿದೆ ಎಂದು ಮೋಹನ್ ಪಾಠಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.