ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರಣ: ಎಲ್ಲಾ ಆರೋಪಿಗಳ ಬಂಧನ

ನವದೆಹಲಿ: ಹರ್ಯಾಣ ಸಿಬಿಎಸ್​ಇ ಟಾಪರ್ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕುರಿತು ಹರಿಯಾಣ ಪೊಲೀಸ್‌ ಮುಖ್ಯಸ್ಥ ಬಿ ಎಸ್‌ ಸಂಧು ಮಾಹಿತಿ ನೀಡಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ರಾಜಸ್ತಾನದ ಕೋಟಾಗೆ ನಿಯೋಜಿಸಲಾಗಿದ್ದ ಯೋಧ ಪಂಕಜ್‌ ಫೌಜಿ ಮತ್ತು ಆತನ ಸ್ನೇಹಿತ ಮನಿಷ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಮಾಸ್ಟರ್‌ ಮೈಂಡ್‌ ನಿಶು, ವೈದ್ಯ ಮತ್ತು ಅತ್ಯಾಚಾರಕ್ಕೆಂದು ಬಳಕೆ ಮಾಡಿದ್ದ ಮನೆಯ ಮಾಲೀಕನನ್ನು ಬಂಧಿಸಲಾಗಿತ್ತು.

ಹರಿಯಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು.

ಸೆಪ್ಟೆಂಬರ್‌ 12ರಂದು ಯುವತಿ ಕೋಚಿಂಗ್‌ ಕ್ಲಾಸ್‌ಗೆಂದು ತೆರಳುವಾಗ ಕಿಡ್ನಾಪ್‌ ಮಾಡಿ, ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ನಂತರ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ