ವಿಶಾಖಪಟ್ಟಣಂ: ಆಂಧ್ರದ ವಿಶಾಖಪಟ್ಟಣಂ ಬಳಿ ಇಬ್ಬರು ಟಿಡಿಪಿ ಶಾಸಕರನ್ನು ನಕ್ಸಲರ ಗುಂಪು ಹತ್ಯೆಗೈದಿದೆ. ಅರಕು ವಿಧಾನಸಭೆ ಕ್ಷೇತ್ರದ ಟಿಡಿಪಿ ಶಾಸಕ ಕದಿರಿ ಸರ್ವೇಶ್ವರ ರಾವ್ ಮತ್ತು ಅರಕು ಕ್ಷೇತ್ರದ ಮಾಜಿ ಶಾಸಕ ಶಿವಾರಿ ಸೋಮಾ ಮೃತರು.
ಈ ಇಬ್ಬರೂ ಮುಖಂಡರು ತೆಲುಗುದೇಶಂ ಪಕ್ಷದ ಸಭೆಯೊಂದರಲ್ಲಿ ಭಾಗವಹಿಸಿ ಮರಳಿ ಕ್ಷೇತ್ರಕ್ಕೆ ಬರುತ್ತಿದ್ದಾಗ ಮಹಿಳಾ ಮಾವೋವಾದಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ತುತಂಗಿ ಎಂಬಲ್ಲಿ ಮುಖಂಡರ ಕಾರು ತಡೆದಿರುವ ನಕ್ಸಲರ ತಂಡ, ತೀರ ಹತ್ತಿರದಿಂದಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಹತ್ತಿರದಿಂದಲೇ ಬಂದೂಕಿನಿಂದ ಗುಂಡು ಹಾರಿಸಿರುವುದರಿಂದ ಇಬ್ಬರ ದೇಹಗಳು ಜರ್ಜರಿತಗೊಂಡಿದ್ದವು. ಗುಂಡುಗಳು ದೇಹವನ್ನು ಭೇದಿಸಿಕೊಂಡು ಹೊರ ಬಂದಿದ್ದವು. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹೀಗಾಗಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿದ್ದ ಅರಕು ಕಣಿವೆ ವಿಧಾನಸಭೆ ಕ್ಷೇತ್ರದಿಂದ 2014ರಲ್ಲಿ ಶಿವಾರಿ ಸೋಮಾ ಅವರ ವಿರುದ್ಧ ವೈಎಸ್ಆರ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಸರ್ವೇಶ್ವರ ರಾವ್, 2016ರಲ್ಲಿ ಪಕ್ಷ ನಿಷ್ಠೆ ಬದಲಿಸಿ ಟಿಡಿಪಿ ಸೇರಿ ಪುನಃ ಶಾಸಕರಾಗಿ ಆಯ್ಕೆಯಾಗಿದ್ದರು.
ಕದಿರಿ ಸರ್ವೇಶ್ವರ ರಾವ್ ನಕ್ಸಲರ ಹಿಟ್ ಲಿಸ್ಟ್ನಲ್ಲಿದ್ದರು. ಸೆ.21 ಸಿಪಿಐ(ಎಂ)ನ ಸಂಸ್ಥಾಪನಾ ದಿನವಾಗಿದ್ದು, ಅದರ ಹಿನ್ನೆಲೆಯಲ್ಲೇ ಸರ್ವೇಶ್ವರ್ ರಾವ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ನಂಬಲಾಗಿದೆ.
ಇದಕ್ಕೂ ಹಿಂದೆ, ಅರಕು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಕ್ಸೈಟ್ ಗಣಿಗಾರಿಕೆಯ ವಿರುದ್ಧ ಸಿಡಿದಿದ್ದ ನಕ್ಸಲರು ಟಿಡಿಪಿ ಮುಖಂಡ ಎಂ. ಬಾಲಯ್ಯ, ಎಂ. ಮಹೇಶ್ ಮತ್ತು ವಿ. ಬಾಲಯ್ಯ ಅವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದರು.