ನವದೆಹಲಿ: ಬಿಜೆಪಿ ಸಂಸದರೊಬ್ಬರು ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಸತ್ ಭವನದ ಮಾದರಿಯ ಕೇಕ್ ನ್ನೇ ಕತ್ತರಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಶಂಕರ್ ಕಟಾರಿಯಾ ತಮ್ಮ ಹುಟ್ಟುಹಬ್ಬಕ್ಕೆ ಸಂಸತ್ ಭವನದ ಮಾದರಿ ಕೇಕ್ ಕತ್ತರಿಸಿ, 54 ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಸಂಸದರ 54ನೇ ವರ್ಷದ ಹುಟ್ಟುಹಬ್ಬವಾಗಿದ್ದರುಂದ 54 ಕೆ.ಜಿ ತೂಕದ ಸಂಸತ್ ಭವನದ ರೂಪದ ಕೇಕ್ ಅದಾಗಿದ್ದು, ಅದರ ಮೇಲೆ ರಾಷ್ಟ್ರಧ್ವಜವನ್ನು ಕೂಡ ಇರಿಸಲಾಗಿತ್ತು. ಪತ್ನಿ ಮೃದುಲಾ ಹಾಗೂ ತಮ್ಮ ಬೆಂಬಲಿಗರ ಜತೆ ಸೇರಿ ಸಂಸತ್ ಭವನದ ಕೇಕ್ ಕತ್ತರಿಸಿದ ಸಂಸದ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.
ಈ ವಿಡಿಯೋ ಈಗ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಸದ ಕಟಾರಿಯಾ ಅವರ ನಡೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಲ್ಲದೆ, ಬಿಜೆಪಿ ವಿರುದ್ಧ ಟೀಕೆಯ ಸುರಿಮಳೆಗೈಯ್ಯಲಾಗಿದ್ದು, ದುರ್ವರ್ತನೆ ಮೆರೆದಿರುವ ಸಂಸದನ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಸಂಘಟನೆ ವಿಶ್ವ ಹಿಂದೂ ಪರಿಷತ್ ಕೂಡ ಒತ್ತಾಯಿಸಿದೆ.
ಇನ್ನು ಸಂಸತ್ ಭವನದ ಮಾದರಿಯ ಕೇಕ್ ಕತ್ತರಿಸಿ ತಿನ್ನುವ ಮೂಲಕ ಸಂಸದ ಕಟಾರಿಯಾ ಭಾರತೀಯ ಸಂಸತ್ನ ಘನತೆಗೆ ದಕ್ಕೆ ತಂದಿದ್ದಾರೆ,” ಎಂದು ಸಮಾಜವಾದಿ ಪಕ್ಷದ ಮುಖಂಡ ವಾಜೀದ್ ನಾಸೀರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ನ ಆಗ್ರಾ ಮೆಟ್ರೋಪಾಲಿಟನ್ ಅಧ್ಯಕ್ಷ ಹಾಜಿ ಜಮಾಲುದ್ದೀನ್, ” ಈ ರೀತಿಯ ಕೇಕ್ ಕತ್ತರಿಸುವ ಮೂಲಕ ಕಟಾರಿಯಾ ಅವರು ಭಾರತೀಯ ಸಂಸದೀಯ ವ್ಯವಸ್ಥೆಯ ಕಗ್ಗೊಲೆ ಮಾಡಿದ್ದಾರೆ. ಇವರಿಗೆ ಸಂಸತ್ ಭವನ ಪ್ರವೇಶ ನಿರ್ಬಂಧಿಸಬೇಕು,” ಎಂದು ಒತ್ತಾಯಿಸಿದ್ದಾರೆ.