ಬೆಂಗಳೂರು, ಸೆ.22- ಮಳೆಯಾಶ್ರಿತ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯಡಿ ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಆರ್ಥಿಕ ನೆರವು ನೀಡಲು ಸಿದ್ದವಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುಜಲ-3 ಯೋಜನೆಯಡಿ ಭೂ ಸಂಪನ್ಮೂಲ ಮಾಹಿತಿ ಪಾಲುದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆ, ಅಭಿವೃದ್ದಿ ನವೀನತೆ ಕಾರ್ಯಕ್ರಮಗಳ ಮೂಲಕ ಜಲಾನಯನ ಪ್ರದೇಶವನ್ನು ಅಭಿವೃದ್ದಿ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿಶ್ವ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರ ಈ ಯೋಜನೆಗೆ ವಿಶೇಷವಾದ ಅನುದಾನ ನೀಡುತ್ತದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಆದ್ಯತೆ ಮೇರೆಗೆ ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.
2013-14ನೇ ಸಾಲಿನಿಂದ ವಿಶ್ವಬ್ಯಾಂಕ್ ನೆರವಿನಿಂದ ಜಲಾನಯನ ಅಭಿವೃದ್ದಿಗೆ 527.70 ಕೋಟಿ ಅನುದಾನದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ಒಟ್ಟು ಐದು ವರ್ಷಗಳವರೆಗೆ ಚಾಮರಾಜನಗರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಿಜಾಪುರ ಇನ್ನಿತರ ಜಿಲ್ಲೆಗಳನ್ನು ಆಯ್ದುಕೊಂಡು 2531 ಕಿರು ಜಲಾನಯನಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.
ಈ ಯೋಜನೆಯಡಿ ಕೃಷಿ,ತೋಟಗಾರಿಕೆ, ಪಶು, ಮೀನುಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಗಳ ಬೆಳೆಗಳನ್ನು ಉತ್ಪಾದನೆಯನ್ನು ಹೆಚ್ಚಿಸಲು ನಾವು ಅನೇಕ ರೀತಿ ಕ್ರಮ ಕೈಗೊಂಡಿದ್ದೇವೆ. ರೈತರು ಮುಂದೆ ಬಂದು ಇದರ ಸದುಪಯೋಗಪಡಿಸಿಕೊಳ್ಳುವಂತೆ ಶಿವಶಂಕರ್ ರೆಡ್ಡಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಮತ್ತು ಸುಜಲ-3 ಯೋಜನೆ ನಿರ್ದೇಶಕ ಪ್ರಭಾಸ್ ರಾಯ್, ಅರಣ್ಯ ಸಂರಕ್ಷಣಾ ಪ್ರಧಾನ ಮುಖ್ಯಾಧಿಕಾರಿ ಅಜಯ್ ಮಿಶ್ರ, ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಮುಂತಾದವರು ಇದ್ದರು.