ಭಾರತದ ಪ್ರಜಾಪ್ರಭುತ್ವ ಒಂದು ಅತ್ಯಂತ ಕೆಟ್ಟ ವ್ಯವಸ್ಥೆ. ಆದರೆ ಇದಕ್ಕಿಂತಲೂ ಸುಧಾರಿತ ವ್ಯವಸ್ಥೆ ಮತ್ತೊಂದಿಲ್ಲ: ನಿವೃತ್ತ ನ್ಯಾ.ವೆಂಕಟಾಚಲಯ್ಯ ಕಳವಳ

Varta Mitra News

ಬೆಂಗಳೂರು,ಸೆ.22- ಭಾರತದ ಪ್ರಜಾಪ್ರಭುತ್ವ ಒಂದು ಅತ್ಯಂತ ಕೆಟ್ಟ ವ್ಯವಸ್ಥೆ. ಆದರೆ ಇದಕ್ಕಿಂತಲೂ ಸುಧಾರಿತ ವ್ಯವಸ್ಥೆ ಮತ್ತೊಂದಿಲ್ಲ ಎಂದು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಭಾಗಶಃ ಅನುಪಾತಿಕ ಚುನಾವಣಾ ವ್ಯವಸ್ಥೆ-ಭಾರತಕ್ಕೆ ಪರ್ಯಾಯ ವ್ಯವಸ್ಥೆ ಕುರಿತ ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ವ್ಯವಸ್ಥೆಯಿಂದಾಗಿ ಇಂದು ಹೆಚ್ಚು ಮತ ಗಳಿಸಿದ ಪಕ್ಷ ಅಧಿಕಾರದಿಂದ ವಂಚಿತವಾಗಬಹುದು. ಕಡಿಮೆ ಮತ ಗಳಿಸಿದವರು ಶಾಸಕರನ್ನು ಆರಿಸಿಕೊಂಡು ಅಧಿಕಾರ ಹಿಡಿಯುವಂತಹ ಸಾರ್ವಭೌಮತ್ವ ವ್ಯವಸ್ಥೆ ಕಾಡುವಂತೆ ಮಾಡಿದೆ ಎಂದು ವಿಷಾದಿಸಿದರು.

ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಹೊರತುಪಡಿಸಿದರೆ ಬೇರೆ ಸಂದರ್ಭದಲ್ಲಿ ಸಂಪೂರ್ಣ ಜನಾಭಿಪ್ರಾಯ ಪಡೆದ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.50ರಷ್ಟು ಹೆಣ್ಣು ಮಕ್ಕಳಿದ್ದರೂ ಶೇ.11ರಷ್ಟು ಮಾತ್ರ ಅವರಿಗೆ ಪ್ರಾತಿನಿಧ್ಯ ದೊರೆತಿದೆ. ಮುಸ್ಲಿಂ ಸಮುದಾಯದಲ್ಲಿ ಸೇ.16ರಷ್ಟು ಮಹಿಳೆಯರು ಇದ್ದರೂ ಶೇ.5.5ರಷ್ಟು ಮಂದಿಗೆ ಪ್ರಾತಿನಿಧ್ಯ ದೊರೆಕಿದೆ ಎಂದರು.

20ನೇ ಶತಮಾನಕ್ಕೆ ಹೋಲಿಸಿದರೆ 21 ಶತಮಾನದಲ್ಲಿ ನಾವು 10 ಸಾವಿರ ಪಟ್ಟು ಹೆಚ್ಚು ಅಭಿವೃದ್ಧಿ ಸಾಧಿಸಿದ್ದೇವೆ. ಆದರೆ ಮನುಷ್ಯತ್ವ ಮಾನವೀಯತೆ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದ್ದೇವೆ. ಈ ವೇಗದ ಅಭಿವೃದ್ಧಿ ಸಾಧಿಸುತ್ತಿದ್ದರೂ ಮನುಷ್ಯನ ಜೀವಿತಾವಧಿ ಸರಾಸರಿ ಒಂದು ವರ್ಷ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದರು.
ಮಾಜಿ ಅಡ್ವೋಕೇಟ್ ಜನರಲ್ ಪೆÇ್ರ.ರವಿವರ್ಮ ಕುಮಾರ್ ಮಾತನಾಡಿ, ದೇಶದಲ್ಲಿ ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

1999ರಲ್ಲಿ ಕಾನೂನು ಆಯೋಗ ಒಂದು ವರದಿ ಕೊಟ್ಟಿತ್ತು. ಈ ವರದಿಯ ಚರ್ಚೆಯೇ ನಡೆದಿಲ್ಲ. ಅದು ಸರಿಯಿಲ್ಲದಿದ್ದರೆ ತಿರಸ್ಕರಿಸೋಣ ಆದರೆ ಅದಕ್ಕೂ ಮುನ್ನ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ವಯಸ್ಕರ ಮತದಾನ ವ್ಯವಸ್ಥೆ ಜಾರಿಗೆ ಮುನ್ನ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿರಲಿಲ್ಲ ಎಂದ ಅವರು, ಪ್ರಸ್ತುತ ಇರುವ ವ್ಯವಸ್ಥೆಯಿಂದಾಗಿ ಕಡಿಮೆ ಮತ ಪಡೆದವರು ಅಧಿಕಾರ ಹಿಡಿಯುವಂತಾಗಿದೆ. 104 ಸ್ಥಾನ ಪಡೆದ ಬಿಜೆಪಿ ಮೂಲೆಗುಂಪಾದರೆ ಶೇ.18ರಷ್ಟು ಗೆಲುವು ಸಾಧಿಸಿದ್ದ ಜೆಡಿಎಸ್ ಅಧಿಕಾರ ಪಡೆದಿದೆ ಎಂದು ಹೇಳಿದರು.
ಮಹಿಳೆಯರಿಗೆ ಬೆರಳೆಣಿಕೆಯಷ್ಟು ಸೌಲಭ್ಯ ಮಾತ್ರ ದೊರಕುತ್ತಿದೆ. ಧರ್ಮಗಳು ಪರಸ್ಪರ ಒಂದಕ್ಕೊಂದು ಸ್ಪಂದಿಸುತ್ತವೆ ಆದರೆ ಜಾತಿಗಳು ಪರಸ್ಪರ ಒಂದರ ಮೇಲೊಂದು ಸವಾರಿ ಮಾಡುತ್ತಿವೆ ಎಂದು ವಿಷಾದಿಸಿದರು.

ದೇಶದಲ್ಲಿ ಯಾವುದೇ ಒಂದು ಹಳ್ಳಿಯಲ್ಲಿ ಒಬ್ಬ ದಲಿತನಿಗೆ ಊರಿನ ಒಳಗೆ ಮನೆ ಕೊಟ್ಟಿಲ್ಲ. ಹೀಗಿದ್ದರೂ ಸಹ ಸಮಾನ ಸಮಾಜ ಎಂದು ಕರೆಯುತ್ತೇವೆ. ಅಂತಹ ಸಮಾನ ಸಮಾಜ ನಿರ್ಮಾಣವಾಗಲು ನಮ್ಮಲ್ಲಿ ಪರ್ಯಾಯ ವ್ಯವಸ್ಥೆ ಜಾರಿಗೊಳ್ಳಬೇಕಿದೆ.
ಅದೆಂದರೆ ಶಿಕ್ಷಕರ, ವಿದ್ಯಾವಂತರು ಸೇರಿದಂತೆ ಇನ್ನಿತರ ಕ್ಷೇತ್ರವಾರು ಜನಪ್ರತಿನಿಧಿಗಳು ಆಯ್ಕೆಯಾಗಬೇಕು. ಮೊದಲು ನಗರ ಸ್ಥಳೀಯ ಸಂಸ್ಥೆ ನಂತರ ಗ್ರಾಮೀಣ ಸಂಸ್ಥೆಗಳು ಸೇರಿದಂತೆ ಹಂತ ಹಂತವಾಗಿ ಆಯ್ಕೆ ಪ್ರಕ್ರಿಯೆ ನಡೆಯುವ ವ್ಯವಸ್ಥೆ ಜಾರಿಗೊಳ್ಳಬೇಕು. ಆಗ ಬಹಳಷ್ಟು ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮರ್ಯಾದಾ ಹತ್ಯೆ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರ ಮಾತನಾಡಿ, ಭ್ರಷ್ಟಾಚಾರ ಮಾಡಿ ಕೋಟ್ಯಂತರ ರೂ. ವ್ಯಯಿಸಿ ಚುನಾವಣೆಯಲ್ಲಿ ಗೆದ್ದು ಬಂದು ಬಹಿರಂಗವಾಗಿ ಅಧಿಕಾರ ನಡೆಸುವ ಲಜ್ಜೆ ರಹಿತ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ನುಡಿದರು.
ರಾಜಕೀಯ ಶುದ್ಧಿಕರಣ ಬಹಳ ಕಷ್ಟ ಎಂದ ಅವರು, ಮೊದಲು ಸಂವಿಧಾನ ಬದಲಾವಣೆ , ಅದನ್ನು ಸುಟ್ಟು ಹಾಕುತ್ತೇವೆ ಎಂದೆಲ್ಲ ಮಾತನಾಡುತ್ತಿದ್ದರು. ಅದನ್ನೇ ಕೆಲವರು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಹಿಂದ ಪಕ್ಷ, ಜೆಡಿಎಸ್ ಒಕ್ಕಲಿಗರ ಪ್ರಾಬಲ್ಯವಿರುವ ಪಕ್ಷ. ಸಮಾಜವಾದಿ ಪಕ್ಷದಲ್ಲಿ ಯಾದವರ ಪ್ರಾಬಲ್ಯವಿದೆ. ಬಿಎಸ್‍ಪಿ ದಲಿತರ ಪಕ್ಷ , ಬಿಜೆಪಿಯನ್ನು ಜನವಿರೋಧಿ ಪಕ್ಷ ಎಂದು ಕರೆಯುತ್ತಾರೆ. ಈ ಎಲ್ಲ ಪಕ್ಷಗಳನ್ನು ಪ್ರಬಲ ಜಾತಿಗಳು ನಿಯಂತ್ರಣ ಮಾಡುತ್ತಿವೆ. ಇಂಥ ವ್ಯವಸ್ಥೆ ಇರುವುದು ದುರಂತ ಎಂದು ವ್ಯಾಖ್ಯಾನಿಸಿದರು.
ಇಂದು ದೇಶ ಭಕ್ತಿ ಲಾಭದಾಯಕ ಸರಕ್ಕಾಗಿದೆ. ಆದರೆ ಸಹಿಷ್ಣುತೆ ಸಮಾನತೆ, ಸ್ವಾತಂತ್ರ್ಯ ನೆಲೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ