ಬೆಂಗಳೂರು, ಸೆ.22-ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಪಕ್ಷದ ಶಾಸಕಾಂಗ ಸಭೆ ಹಮ್ಮಿಕೊಳ್ಳಲಾಗಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪಕ್ಷದ ಸಭೆಯನ್ನು ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿದೆ.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಕ್ಕೆ ಕಡಿವಾಣ, ಜೆಡಿಎಸ್ ಶಾಸಕರ ಒಗ್ಗಟ್ಟಿನ ಜಪ, ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು, ಪಕ್ಷವನ್ನು ಸಜ್ಜುಗೊಳಿಸುವುದು ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಇಂದು ಸಂಜೆ ಹಾಸನದ ಬಳಿಯ ಬೇಲೂರು ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಪಾಲ್ಗೊಂಡು ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ಬಿಜೆಪಿಯವರ ಆಪರೇಷನ್ ಕಮಲದ ತಂತ್ರಕ್ಕೆ ಪ್ರತಿತಂತ್ರ ಹಾಗೂ ಎಲ್ಲಾ ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸಲಿದ್ದಾರೆ.
ವಿಧಾನಪರಿಷತ್ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ, ನಾಮನಿರ್ದೇಶನ ಮಾಡುವ ವಿಚಾರದ ಬಗ್ಗೆಯೂ ಚರ್ಚಿಸಿ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ ನಡೆಸುತ್ತಿರುವ ರಾಜಕೀಯ ಚಟುವಟಿಕೆಗಳಿಂದ ಜೆಡಿಎಸ್ ಪಕ್ಷಕ್ಕಾಗುತ್ತಿರುವ ತೊಂದರೆಗಳ ಬಗ್ಗೆ ಗಂಭೀರ ಸಮಾಲೋಚನೆ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ನಿರಂತರ ಪ್ರಯತ್ನ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ದಂಗೆ ಎಂಬ ಹೇಳಿಕೆಯನ್ನೇ ಮುಂದೆ ಮಾಡಿಕೊಂಡು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿರುವುದನ್ನು ಹಣಿಯಲು ಯಾವ ರೀತಿ ಪಕ್ಷ ತಂತ್ರ ಹೆಣೆಯಬೇಕು ಎಂಬ ಬಗ್ಗೆಯೂ ಕೂಡ ಚರ್ಚೆ ನಡೆಯಲಿದೆ.
ಅಲ್ಲದೆ, ಈ ಸಂಬಂಧ ರಾಜ್ಯಪಾಲರಿಗೆ, ರಾಜ್ಯ ಪೆÇಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ಕುಮಾರಸ್ವಾಮಿಯವರ ವಿರುದ್ಧ ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಪಕ್ಷ ಯಾವ ರೀತಿ ಹೋರಾಟ ಹಮ್ಮಿಕೊಳ್ಳಬೇಕು, ಸಮ್ಮಿಶ್ರ ಸರ್ಕಾರವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು, ನಮ್ಮೆಲ್ಲ ಶಾಸಕರು ಒಗ್ಗಟ್ಟಾಗಿರಬೇಕು. ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂಬ ವಿಶ್ವಾಸವನ್ನು ಮೂಡಿಸುವ ಪ್ರಯತ್ನವನ್ನು ಮುಖಂಡರು ಮಾಡಲಿದ್ದಾರೆ.
ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಮೈತ್ರಿ ಪಕ್ಷದ ಮುಖಂಡರು ಅಸಮಾಧಾನಗೊಂಡಿರುವುದೂ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.
48 ಸಾವಿರ ಕೋಟಿಗೂ ಹೆಚ್ಚು ರೈತರ ಸಾಲ ಮನ್ನಾ, ಮೀಟರ್ ಬಡ್ಡಿ ದಂಧೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಜಾರಿ, ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಸೇರಿದಂತೆ ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪಕ್ಷ ಸಂಘಟನೆ ಮಾಡಬೇಕು. ಯಾವುದೇ ಕಾರಣಕ್ಕೆ ಆಪರೇಷನ್ ಕಮಲಕ್ಕೆ ಒಳಗಾಗಬಾರದು. ಬಿಜೆಪಿಯವರು ಸಂಪರ್ಕ ಮಾಡಿದರೂ ಮಣಿಯದೆ ವರಿಷ್ಠರ ಗಮನಕ್ಕೆ ತರಬೇಕು. ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಸರ್ಕಾರವನ್ನು ಮುನ್ನಡೆಸುವ ಕಡೆ ಗಮನ ಹರಿಸಬೇಕು.
ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ಬಗ್ಗೆ ಮೈತ್ರಿ ಪಕ್ಷ ಕಾಂಗ್ರೆಸ್ ಮುಂದಾಗದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕ್ರಮಕೈಗೊಳ್ಳುವ ಭರವಸೆಯೂ ಕೂಡ ಮುಖ್ಯಮಂತ್ರಿಗಳಿಂದ ಸಿಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡ, ರೇವಣ್ಣ ಅವರು ಶೃಂಗೇರಿಯ ಪೂಜಾ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡಿದ್ದು, ಇಂದು ಸಂಜೆ ರೆಸಾರ್ಟ್ಗೆ ತೆರಳಲಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.