ಬೆಂಗಳೂರು, ಸೆ.22-ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಆದಿಜಾಂಬವ ಸಮುದಾಯದವರು ಸಂಘಟಿತರಾಗಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಕರೆ ನೀಡಿದರು.
ನಗರದಲ್ಲಿ ನಡೆದ ಆದಿಜಾಂಬವ ಜಾಗೃತಿ ಮಾಸ ಪತ್ರಿಕೆಯ 17ನೇ ವಾರ್ಷಿಕೋತ್ಸವ ಹಾಗೂ ಜಾಂಬವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತುಳಿತಕ್ಕೊಳಗಾಗಿರುವ ಸಮುದಾಯದವರು ಒಗ್ಗೂಡುವ ಅಗತ್ಯವಿದೆ. ರಾಜಕೀಯವಾಗಿ ಕುತಂತ್ರ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಲು ಶ್ರಮಿಸಬೇಕಿದೆ. ಈ ಹಿಂದೆ ಏನಾಗಿದೆ ಎಂಬುದನ್ನು ಬಿಟ್ಟು ಮುಂದೆ ಏನು ನಡೆಯಬೇಕು ಎಂಬುದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ರಾಜಕೀಯವಾಗಿ ಮುನ್ನಡೆ ಸಾಧಿಸಲು ಸಮುದಾಯದವರು ಪ್ರಯತ್ನಿಸಬೇಕು. ಇದರಿಂದ ಸಮುದಾಯಕ್ಕೆ ಆಗಿರುವ ಅನ್ಯಾಯ ದೂರ ಮಾಡಲು ಸಾಧ್ಯ. ಒಗ್ಗಟ್ಟಿನಿಂದ ಸಮುದಾಯದ ಕಲ್ಯಾಣಕ್ಕೆ ಕಾಳಜಿ ವಹಿಸಿ ಎಂದು ತಿಳಿಸಿದರು.
ಜಾಂಬವ ಸಮುದಾಯದ ಶ್ರೀ ಷಡಕ್ಷರಿ ಮುನಿಸ್ವಾಮೀಜಿ, ಮಾಜಿ ಸಚಿವ ಗೋವಿಂದಕಾರಜೋಳ, ಎಂ.ಶಿವಣ್ಣ, ಇತಿಹಾಸ ತಜ್ಞ ಪ್ರಸನ್ನಕುಮಾರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.