ಬೆಂಗಳೂರು, ಸೆ.22- ರೌಡಿ ಚಟುವಟಿಕೆ, ಮೀಟರ್ ಬಡ್ಡಿ, ಮಟ್ಕಾ ದಂಧೆ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ದಂಧೆಗಳನ್ನು ಮಟ್ಟಹಾಕುವಂತೆ ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಪೊಲೀಸರಿಗೆ ಆದೇಶ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸಿಸಿಬಿ ವಿಭಾಗದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು, ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಅಧಿಕಾರಿಗಳು ಹಾಗೂ ಜನರು ಮೆಚ್ಚುವಂತೆ ಸಿಸಿಬಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಬೇಕು. ಸಂಘಟಿತ ಅಪರಾಧಗಳ ತಡೆಗೆ ಮೊದಲ ಆದ್ಯತೆ ನೀಡಬೇಕು. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಮೊದಲು ಎಚ್ಚರಿಕೆ ನೀಡಬೇಕು. ನಂತರ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಸೂಚನೆ ನೀಡಿದರು.
ಅಪರಾಧ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದವರ ಪಟ್ಟಿ ತಯಾರಿಸಿ ಆದಷ್ಟು ಬೇಗ ಅವರನ್ನು ಬಂಧಿಸಬೇಕು ಎಂದು ಆದೇಶಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಮೇಲೆ ನಂಬಿಕೆ ಇಟ್ಟು ಈ ಹುದ್ದೆಯನ್ನು ನೀಡಿದ್ದಾರೆ. ಅವರು ಮತ್ತು ನಗರದ ಜನರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ. ನಗರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆ ಮಾಡಲು ತಾವೆಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಸಿಸಿಬಿ ವಿಭಾಗದ ಇಬ್ಬರು ಡಿಸಿಪಿಗಳು, ಎಲ್ಲಾ ವಿಭಾಗದ ಎಸಿಪಿಗಳು, ಇನ್ಸ್ಪೆಕ್ಟರ್ಗಳು ಹಾಜರಿದ್ದರು.