ಚಿಕ್ಕಮಗಳೂರು: ಚೇರ್ ಹೋಗುತ್ತೆ ಅನ್ನೋ ಭಯ ನನಗಿಲ್ಲ. ಮುಖ್ಯಮಂತ್ರಿ ಸ್ಥಾನ ಶಾಶ್ವತವೂ ಅಲ್ಲ. ಈ ರಾಜ್ಯದಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗುತ್ತಾ ಇರುತ್ತವೆ ಅಂತ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನನಗೇನೂ ಚೇರ್ ಹೋಗುತ್ತೆ ಅನ್ನೋ ಭಯವಿಲ್ಲ. ಈ ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ಈ ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗಿ ಹೋದ್ರು. ಎಷ್ಟು ಸರ್ಕಾರಗಳು ಬಂದು ಹೋದವು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆಗಳು ಸಹಜ. ಹೀಗಾಗಿ ಇಲ್ಲಿ ಅದು ಮುಖ್ಯವಲ್ಲ. ಜನಕ್ಕೆ ಏನಾಗಬೇಕು? ಜನರ ಕಷ್ಟವನ್ನು ಆಲಿಸುವುದು ಮುಖ್ಯ ಅನ್ನೋದು ನನ್ನ ಮನಸ್ಸಿನಲ್ಲಿರುವಂತದ್ದುಎಂದರು.
ಮಾಧ್ಯಮದ ವಿರುದ್ಧ ಅಸಮಾಧಾನ:
ಯಾಕೆ ನಂಗೆ ಇಷ್ಟೊಂದು ಹಿಂಸೆ ಕೊಡುತ್ತೀರಿ. ಯಾಕೆ ನಂಗೇ ಇಷ್ಟೊಂದು ಪ್ರಶ್ನೆಗಳನ್ನು ಕೇಳುತ್ತೀರಿ ಎಂದು ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮದೆದುರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನನ್ನ ಕೆಲಸಕ್ಕೆ ಪ್ರಚಾರ ಕೊಡ್ತಿಲ್ಲ. ಅಧಿಕಾರ ಇಲ್ಲದಾಗ ಬಂದ್ರೆ ಪ್ರಚಾರ ಕೊಡಲ್ಲ. ಅಧಿಕಾರ ಇದ್ದಾಗ ಬಂದರೆ ಪ್ರಚಾರ ಕೊಡ್ತಿರಿ ಅಂತ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಕ್ಷೇತ್ರಕ್ಕೆ ಬರುತ್ತಾ ಇರುತ್ತೇನೆ. ಇದು ಹೊಸದೇನಲ್ಲ. ಅಧಿಕಾರ ಇಲ್ಲದೇ ಇದ್ದಾಗಲೂ ಬಂದಿದ್ದೇನೆ. ಆದ್ರೆ ಅಧಿಕಾರ ಇಲ್ಲದೇ ಇದ್ದಾಗ ಬಂದಾಗ ಪ್ರಚಾರ ಸಿಕ್ಕಿಲ್ಲ. ದೇವರ ದರ್ಶನಕ್ಕೆ ಬಂದಿದ್ದನ್ನು ಪ್ರಚಾರ ಕೊಡುತ್ತೀರಿ. ಈಗಾಗಲೇ ರೈತರ ಸಾಲಮನ್ನಾ ಮಾಡಲು ನಾನು ತೆಗೆದುಕೊಂಡ ನಿರ್ಧಾರಗಳು, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಈಗಾಗಲೇ ಸರ್ಕಾರದಿಂದ ನಿರ್ದೇಶನಗಳನ್ನು ನೀಡಿದ್ದೇನೆ. ಅದ್ಯಾವುದಕ್ಕೂ ಪ್ರಚಾರ ಕೊಡಲ್ಲ. ದೇವರ ದರ್ಶನ ಇದ್ರೆ ಪ್ರಚಾರ ಕೊಡುತ್ತೀರಿ. ಗುರುಗಳ ದರ್ಶನ, ದೇವರ ಆಶೀರ್ವಾದ ಇದ್ರೇನೆ ಎಲ್ಲರೂ ಬದುಕೋದು ಎಂದರು.
ಇವುಗಳಲ್ಲದರ ಜೊತೆಗೆ ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ಅದು ಬಿಟ್ಟು ಇನ್ಯಾವುದೋ ವಿಚಾರಗಳಿಗೆ ಪ್ರಚಾರ ನೀಡುತ್ತೀರಿ. ಯಾತಕ್ಕೆ ನನಗೆ ಹಿಂಸೆ ಕೊಡುತ್ತೀರಿ ಅಂತ ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಹಲವೆಡೆ ಬರಗಾಲ ಪ್ರಾರಂಭವಾಗಿದೆ. ಹೀಗಾಗಿ ಇಂದು ಶೃಂಗೇರಿಗೆ ಭೇಟಿ ನಿಡಿ ಗುರುಗಳ ಬಳಿ ಮನವಿ ಮಾಡಿಕೊಂಡಿದ್ದೀನಿ. ಜನ ಬರಗಾಲದಿಂದ ಮುಕ್ತರಾಗುವಂತಹ ವಾತಾವರಣ ನಿರ್ಮಾಣ ಮಾಡು ತಾಯಿ ಅಂತ ಇಂದು ಬೇಡಿಕೊಂಡಿದ್ದೇನೆಎಂದು ತಿಳಿಸಿದರು.