ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಜೊತೆಯಲ್ಲಿ ನಡೆಯಬೇಕಿದ್ದ ವಿದೇಶಾಂಗ ಸಚಿವಾಲಯ ಮಟ್ಟದ ಮಾತುಕತೆಯನ್ನು ಭಾರತ ಹಿಂತೆಗೆದುಕೊಂಡಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರ ಜೊತೆ ಈ ತಿಂಗಳ ಕೊನೆಯಲ್ಲಿ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಯುಎನ್ಜಿಎ ಸಭೆಯ ಜೊತೆಯಲ್ಲಿ ಈ ಸಭೆ ನಡೆಯಬೇಕಿತ್ತು.
ಇತ್ತೀಚೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕಗಳಿಂದ ಭಾರತದ ಭದ್ರತಾ ಪಡೆಗಳನ್ನು ಕ್ರೂರವಾಗಿ ಕೊಂದ ಹಿನ್ನಲೆ ಮತ್ತು ಪಾಕಿಸ್ತಾನ ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ವ್ಯೆಭವೀಕರಿಸುವ ೨೦ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.
ಪಾಕಿಸ್ತಾನವು ತನ್ನ ತಪ್ಪು ದಾರಿಯನ್ನು ತಿದ್ದಿಕೊಳ್ಳುವುದಿಲ್ಲ ಎಂದು ಈ ಘಟನೆಗಳು ದೃಡಪಡಿಸುತ್ತವೆ ಎಂದು ಹೇಳಿದರು. ಪಾಕಿಸ್ತಾನ ಹೊಸದಾಗಿ ಮಾತುಕತೆಗೆ ಆಹ್ವಾನಿಸಿ ಅದರ ಹಿಂದೆ ಈ ತರಹದ ಪ್ರಚೋದನೆಗೆ ಕುಮ್ಮಕ್ಕು ನೀಡುತ್ತಿದೆ. ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ಕೆಲವು ತಿಂಗಳುಗಳಲ್ಲೆ ಅವರ ಮುಖವಾಡ ಬಯಲಾಗಿದೆ, ಇದು ಇಡೀ ವಿಶ್ವಕ್ಕೆ ಗೊತ್ತಾಗಲಿದೆ ಎಂದು ಹೇಳಿದರು.
ಈ ತರಹದ ವಾತವರಣದಲ್ಲಿ ಯಾವುದೇ ಮಾತುಕತೆ ಪಾಕಿಸ್ತಾನದ ಜೊತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ರವೀಶ್ ಕುಮಾರ್ ಹೇಳಿದರು.