ಬೆಂಗಳೂರು, ಸೆ.21 ಸೋಮವಾರದ ವೇಳೆಗೆ ನಗರದ ಎಲ್ಲ ರಸ್ತೆ ಗುಂಡಿಗಳನ್ನೂ ಮುಚ್ಚಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ತಿಳಿಸಿದರು.
ನಗರದ ಎಲ್ಲ ಗುಂಡಿಗಳಿಗೂ ಮುಕ್ತಿ ಹಾಡಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಗುಂಡಿ ಮುಚ್ಚುವ ಕಾರ್ಯ ನಿರಂತರವಾಗಿ ಸಾಗುತ್ತಿದೆ.
ಸ್ವತಃ ಮೇಯರ್ ಸಂಪತ್‍ರಾಜ್ ಅವರೇ ರಸ್ತೆಗುಂಡಿ ಮುಚ್ಚುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಂಜಿ ರಸ್ತೆ, ಮಾರ್ಗೋಸ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಗುಂಡಿ ಮುಚ್ಚುವ ಕಾರ್ಯಗಳನ್ನು ನಾನೇ ಪರಿಶೀಲಿಸಿದ್ದೇನೆ. ಎಲ್ಲ ಕಡೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದರು.
ಸೋಮವಾರದ ವೇಳೆಗೆ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು. ಅನುಮಾನವಿದ್ದರೆ ಯಾರು ಬೇಕಾದರೂ ಬಂದು ಕಾಮಗಾರಿಗಳ ತಪಾಸಣೆ ನಡೆಸಬಹುದು ಎಂದು ಅವರು ತಿಳಿಸಿದರು.
ನಗರದ ರಸ್ತೆ ಗುಂಡಿಗಳ ಬಗ್ಗೆ ಎಲ್ಲ ಮಾಹಿತಿ ಲಭ್ಯವಾಗುವಂತೆ ಬಿಬಿಎಂಪಿಯಲ್ಲಿ ಒಂದು ವೆಬ್‍ಸೈಟ್‍ಅನ್ನು ಸಿದ್ಧಪಡಿಸುತ್ತಿದ್ದೇವೆ. ಆ ಸೈಟ್‍ನಲ್ಲಿ ರಸ್ತೆಗುಂಡಿಗಳ ಸಂಪೂರ್ಣ ವಿವರ ಸಿಗಲಿದೆ ಎಂದು ಅವರು ಹೇಳಿದರು.