ಬೆಂಗಳೂರು,ಸೆ. 21ಆಪರೇಷನ್ ಕಮಲದ ಬೆನ್ನಲ್ಲೇ ಉತ್ತರ ಕರ್ನಾಟಕದ ಐದಕ್ಕೂ ಹೆಚ್ಚು ಮಂದಿ ಶಾಸಕರು ರಾಜ್ಯದ ಪ್ರಮುಖ ಮಠದಲ್ಲಿ ಬೀಡುಬಿಟ್ಟಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಕೆಲವು ಶಾಸಕರು ಈಗಾಗಲೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿರುವ ನಡುವೆಯೇ ಜೆಡಿಎಸ್, ಕಾಂಗ್ರೆಸ್ನ ಕೆಲ ಶಾಸಕರು ಮಠದಲ್ಲಿ ನೆಲಸಿದ್ದಾರೆ ಎಂಬ ವದಂತಿ ಸಮ್ಮಿಶ್ರ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಆಪರೇಷನ್ ಕಮಲದ ಸುದ್ದಿ ಹಬ್ಬಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮಠಕ್ಕೆ ಒಂದು ಸಮುದಾಯದ ಶಾಸಕರು ಭೇಟಿ ನೀಡಿ ಅಲ್ಲೇ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ನಿನ್ನೆಯಿಂದಲೂ ಶಾಸಕರು ಯಾರ ಕೈಗೂ ಸಿಗದೆ, ಮಠದಲ್ಲಿ ಅಡಗಿದ್ದಾರೆ, ಮಠದ ಮುಖ್ಯಸ್ಥರು ಕೂಡ ಇಲ್ಲಿ ಯಾರು ಇಲ್ಲ ಎಂಬ ಉತ್ತರ ನೀಡಿ ಮಾಧ್ಯಮದವರನ್ನು ಸಾಗ ಹಾಕಿದ್ದಾರೆ.
ಉತ್ತರ ಕರ್ನಾಟಕದ ಸಾಕಷ್ಟು ವಿದ್ಯಾರ್ಥಿಗಳು ಮಠದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ತಮ್ಮೂರಿನ ಶಾಸಕರು ಮಠಕ್ಕೆ ಆಗಮಿಸಿದ್ದನ್ನು ಕಂಡು ತಮ್ಮೂರಿನವರಿಗೆ ದೂರವಾಣಿ ಕರೆ ಮಾಡಿ ತಿಳಿಸಿರುವುದರಿಂದ ವಿಷಯ ಬಹಿರಂಗಗೊಂಡಿದೆ.