ನಮಗೆ ಕನಕಪುರ ಬೇರೆಯಲ್ಲ, ಕುಣಿಗಲ್ ಬೇರೆ ಅಲ್ಲ: ಸಂಸದ ಡಿ.ಕೆ.ಸುರೇಶ್
ಕುಣಿಗಲ್,ಮಾ.4-ನಮಗೆ ಕನಕಪುರ ಬೇರೆಯಲ್ಲ, ಕುಣಿಗಲ್ ಬೇರೆ ಅಲ್ಲ. ಇವೆರಡೂ ಕೂಡ ಒಂದೇ. ಮತದಾರರ ಋಣ ನಮ್ಮ ಮೇಲಿದೆ. ನಾವು ಅವರ ಸೇವಕರೇ ಹೊರತು ಬೇರೆ ಯಾರಿಗೂ ಹೆದರುವ ಮಕ್ಕಳಲ್ಲ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಅಮೃತೂರು ಬೆಸ್ಕಾಂ ವತಿಯಿಂದ ಏರ್ಪಡಿಸಿದ್ದ 250 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ವೇದಿಕೆಯಲ್ಲಿ ತಮ್ಮ ಕಾರ್ಯಕರ್ತರನ್ನು ಮೆಚ್ಚಿಸುವ ಸಲುವಾಗಿ ನಮ್ಮ ಮೇಲೆ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಇಂಥದಕ್ಕೆಲ್ಲ ನಾವು ಬಗ್ಗುವುದಿಲ್ಲ. ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಅವರ ಸೇವೆಯೇ ನಮ್ಮ ಕರ್ತವ್ಯ ಎಂದು ಹೇಳಿದರು.
ತಾಲ್ಲೂಕಿಗೆ ಇಂಧನ ಸಚಿವರು ಎಚ್ವಿಡಿಎಸ್ ಯೋಜನೆಯಡಿ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ನೀಡಲು 160 ಕೋಟಿ ಹಣ ಮಂಜೂರು ಮಾಡಿದ್ದಾರೆ. ಇದರಿಂದ ಎರಡೂವರೆ ಸಾವಿರ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲ್ಲೂಕಿಗೆ ನಾಲ್ಕು ವಿಭಾಗಗಳನ್ನು ಮಂಜೂರು ಮಾಡಿದ್ದು , ಮೂರು ವಿಭಾಗಗಳು ಮುಕ್ತಾಯವಾಗಿವೆ ಎಂದರು.
ತಾಲ್ಲೂಕನ್ನು ಇನ್ನೂ ಹೆಚ್ಚು ಅಭಿವೃದ್ದಿಪಡಿಸಲು ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ನಮಗೆ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಮನುಷ್ಯನಿಗೆ ಅಧಿಕಾರ ಶಾಶ್ವತವಲ್ಲ. ಅಧಿಕಾರದ ಅವಧಿಯಲ್ಲಿ ನಮ್ಮ ಸಾಧನೆ ಏನೆಂಬುದೇ ಮುಖ್ಯ. ನಂಬಿಕೆಯಿಟ್ಟು ನಮಗೆ ಮತ ನೀಡಿರುವ ಮತದಾರರ ಋಣ ತೀರಿಸುವುದು ಕರ್ತವ್ಯ ಎಂದು ತಿಳಿಸಿದರು.
ನನ್ನ ಸಹೋದರ ಡಿ.ಕೆ.ಸುರೇಶ್ ಅವರನ್ನು ಎರಡು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದೀರಿ. ಆದ್ದರಿಂದ ವಿಶೇಷವಾಗಿ ಕುಣಿಗಲ್ ತಾಲ್ಲೂಕಿಗೆ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸಿದೆ. ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ದಿ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.
ರೈತರ ಬವಣೆಯ ಅರಿವಿದೆ. ಅವನ ಉಳಿವಿಗಾಗಿ ಈ ಬಾರಿ ಬಜೆಟ್ನಲ್ಲಿ ಒಣಭೂಮಿ ಬೇಸಾಯಗಾರರಿಗೆ ತಲಾ ಐದು ಎಕರೆ ಜಮೀನು ಉಳ್ಳವರಿಗೆ 10 ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲು 3200 ಕೋಟಿ ಇಡಲಾಗಿದೆ ಎಂದರು.
ವೈ.ಕೆ.ರಾಮಯ್ಯ, ಎನ್.ಹುಚ್ಚ ಮಾಸ್ತಿಗೌಡರ ಶಿಷ್ಯರಾಗಿ ನಾವು ಈ ತಾಲ್ಲೂಕಿನಲ್ಲಿ ಸೇವೆ ಮಾಡುತ್ತಿದ್ದೇವೆ. ಇನ್ನು ಮುಂದೆಯೂ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೋರಿದರು.
ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಆಡಿಟರ್ ನಾಗರಾಜ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ರುದ್ರಪ್ಪ , ಕಾಂಗ್ರೆಸ್ ಮುಖಂಡ ಎಚ್.ಡಿ.ರಂಗನಾಥ್, ತಾಪಂ ಸದಸ್ಯ ವಿಶ್ವನಾಥ್, ಸದಸ್ಯೆ ತ್ರಿಪುರ ಸುಂದರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ನಾಗರಾಜ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್, ಛೀಫ್ ಇಂಜಿನಿಯರ್ ಆದಿನಾರಾಯಣ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.