ನವದೆಹಲಿ: ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದುಇ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಪುನರಾರಂಭದ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹ್ಮೂದ್ ಖುರೇಶಿ ನಡುವೆ ಸಭೆ ನಡೆಸುವ ಸಾಧ್ಯತೆ ಕುರಿತು ಪರಿಶೀಲಿಸಲು ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.
ಎರಡು ದೇಶಗಳ ನಡುವೆ ಅರ್ಥಪೂರ್ಣ ಹಾಗೂ ರಚನಾತ್ಮಕ ಮೈತ್ರಿಯಾಗುವುದನ್ನು ಬಯಸುತ್ತೇನೆ ಎಂಬ ಮೋದಿಯವರ ಮಾತಿಗೆ ಪ್ರತಿಕ್ರಿಯೆಯಾಗಿ ಇಮ್ರಾನ್ ಖಾನ್ ಈ ಪತ್ರ ಬರೆದಿದ್ದಾರೆ.
ವಿವಾದಗಳನ್ನು ಬಗೆ ಹರಿಸಲು ಭಾರತ ಒಂದು ಹೆಜ್ಜೆ ಮುಂದಾದರೆ ಪಾಕಿಸ್ತಾನ ಎರಡು ಹೆಜ್ಜೆ ಮುಂಬರುವುದಾಗಿ ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಬಳಿಕ ತಿಳಿಸಿದ್ದರು.
ಇನ್ನು ಎರಡೂ ರಾಷ್ಟ್ರಗಳು ಮಾತುಕತೆಯ ಭಿನ್ನಾಭಿಪ್ರಾಯಗಳು, ಕಾಶ್ಮೀರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಇಮ್ರಾನ್ ಖಾನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.ಅಂತೆಯೇ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉಭಯ ದೇಶಗಳ ನಡುವಿನ ಒಪ್ಪಂದಗಳ ಹಲವು ಯೋಜನೆಗಳ ಕುರಿತೂ ಇಮ್ರಾನ್ ಖಾನ್ ಉಲ್ಲೇಖ ಮಾಡಿದ್ದು, ಎಲ್ಲ ಸಮಸ್ಯೆಗಳನ್ನೂ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ