ಲಕ್ನೋ, ಮಾ.4-ಈಶಾನ್ಯ ರಾಜ್ಯಗಳಲ್ಲಿ ಐತಿಹಾಸಿಕ ಗೆಲುವಿನ ನಂತರ, ಬಿಜೆಪಿ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲೂ ಅರಳಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭವಿಷ್ಯ ನುಡಿದಿದ್ದಾರೆ.
ರಾಜಧಾನಿ ಲಕ್ನೋದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ದೃಷ್ಟಿಕೋನ ನೀತಿಗಳು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂಘಟನಾ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕಾಲ ದೂರವಿಲ್ಲ ಎಂದು ವಿಶ್ವಾಸದಿಂದ ನುಡಿದ ಯೋಗಿ, ಜನರ ಅಶೋತ್ತರಗಳಿಗೆ ಬಿಜೆಪಿ ಸ್ಪಂದಿಸುತ್ತಿರುವ ಕಾರಣದಿಂದ ಈ ರಾಜ್ಯಗಳಲ್ಲಿ ಗೆಲುವು ಲಭಿಸಿತ್ತು, ಇದು ಮುಂದುವರಿಯಲಿದೆ. ಹಾಗೆಯೇ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲೂ ಅರಳಲಿದೆ ಎಂದು ಹೇಳಿದರು.