ಬೆಂಗಳೂರು, ಸೆ.17-ಸ್ಯಾಂಡಲ್‍ವುಡ್‍ನ ದಿಗ್ಗಜ, ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಖ್ಯಾತ ನಟಿ ಶೃತಿ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಡಗರ, ಸಂಭ್ರಮದಿಂದ ರಾಜ್ಯಾದ್ಯಂತ ಇಂದು ಆಚರಿಸಿದರು.
ನಟ ಉಪೇಂದ್ರ ಅವರು ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ವೇಳೆ ಉತ್ತಮ ಪ್ರಜಾಕೀಯ ಎಂಬ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಉಪೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೆಳಗ್ಗಿನ ಜಾವದಿಂದಲೇ ಅವರ ಮನೆಯ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಶುಭ ಕೋರಿದರು. ಉಪ್ಪಿ ಕೈಯಿಂದಲೇ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ಹುಟ್ಟುಹಬ್ಬದ ಅಂಗವಾಗಿ ನಿರ್ದೇಶಕ ಆರ್.ಚಂದ್ರು ನಿರ್ದೇಶಿಸುತ್ತಿರುವ ಐ ಲವ್ ಯೂ ಚಿತ್ರದ ಮೋಷನ್ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು.
ಉಪೇಂದ್ರ ಅವರು ಈಗಾಗಲೇ ಉಪ್ಪಿರುಪ್ಪಿ, ರವಿಚಂದ್ರ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ಉಪೇಂದ್ರ ಅವರ ಪತ್ನಿ ಪ್ರಿಯಾಂಕ, ಇಬ್ಬರು ಮಕ್ಕಳು ಮತ್ತು ತಂದೆ, ತಾಯಿ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.
ದಿವಂಗತ ಸಾಹಸ ಸಿಂಹ ವಿಷ್ಣು ವರ್ಧನ್ ಅವರ 68ನೇ ಜನ್ಮ ದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಉತ್ತರಹಳ್ಳಿ ರಸ್ತೆಯ ಕೆಂಗೇರಿ ಸಮೀಪ ಇರುವ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕವನ್ನು ಹೂವಿನಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು.
ಸ್ಮಾರಕ ಬಳಿಯೇ ರಕ್ತದಾನ ಶಿಬಿರ, ಅನ್ನದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದರು.
ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಅವರು ಮನೆಯಲ್ಲಿಯೇ ವಿಷ್ಣು ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ನಟಿ ಶೃತಿ ಅವರು ಕೂಡ ಇಂದು 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರು ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.