ಎಲ್ಲಾ ಭಿನ್ನಮತ ಬಗೆಹರಿದಿದೆ: ಸತೀಶ್ ಜಾರಕಿಹೊಳಿ

ಬೆಂಗಳೂರು, ಸೆ.18-ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ರೆಸಾರ್ಟ್ ಯಾತ್ರೆಯನ್ನು ಕೈಗೊಂಡಿಲ್ಲ ಎಂದು ಮಾಜಿ ಸಚಿವ ಹಾಗೂ ಬೆಳಗಾವಿ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಭಿನ್ನಮತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರು ಹಾಗೂ ಇನ್ನಿತರೆ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಭಿನ್ನಮತ ಬಗೆಹರಿದಿದೆ. ಉಪಮುಖ್ಯಮಂತ್ರಿಯಾಗಲಿ, ಇನ್ನಿತರೆ ಯಾವುದೇ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿಲ್ಲ, ರೆಸಾರ್ಟ್‍ಯಾತ್ರೆಯನ್ನು ಕೈಗೊಂಡಿಲ್ಲ, ರಾಜೀನಾಮೆಯನ್ನೂ ನೀಡುತ್ತಿಲ್ಲ ಎಂದರು.

ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ ಮುಂತಾದವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಬೆಳಗ್ಗೆ ಸಂಧಾನ ಸಭೆ ನಡೆಸಿದ ನಂತರ ಸತೀಶ್ ಅವರು ಈ ರೀತಿ ಹೇಳಿಕೆ ನೀಡಿದ್ದನ್ನು ಗಮನಿಸಿದರೆ ಸಂಧಾನ ಬಹುತೇಕ ಯಶಸ್ವಿಯಾದಂತೆ ಕಂಡುಬಂದಿತು.
ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬೆಳಗಾವಿ ರಾಜಕಾರಣದಲ್ಲಿ ತಲೆ ಹಾಕದಂತೆ ನಿಯಂತ್ರಿಸಿ. ಭಿನ್ನಮತೀಯ ಶಾಸಕರನ್ನು ಕಡೆಗಣಿಸಬೇಡಿ ಎಂಬಿತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಬಳಿ ಅತೃಪ್ತರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಎಚ್‍ಡಿಕೆ ಅವರು ಹೈಕಮಾಂಡ್ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆಡಳಿತಾತ್ಮಕ ವಿಷಯಗಳ ಬಗ್ಗೆ ಸ್ಪಂದಿಸುತ್ತೇನೆ. ಪಕ್ಷದ ವಿಷಯದ ಬಗ್ಗೆ ಇರುವ ಭಿನ್ನಮತವನ್ನು ಹೈಕಮಾಂಡ್ ನಾಯಕರೊಂದಿಗೆ ಬಗೆಹರಿಸಿಕೊಳ್ಳಬೇಕು. ನಾನೂ ಕೂಡ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಮಾತುಕತೆ ನಡೆಸಿದ ಜಾರಕಿಹೊಳಿ ಸಹೋದರರು ಹೊರ ಬಂದು, ನಮ್ಮದ್ಯಾವುದೂ ಬೇಡಿಕೆ ಇಲ್ಲ. ರೆಸಾರ್ಟ್ ರಾಜಕೀಯವೂ ಇಲ್ಲ ಎಂದು ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಭಿನ್ನಮತಕ್ಕೆ ಅಲ್ಪವಿರಾಮ ಸಿಕ್ಕಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ