ಬೆಂಗಳೂರು, ಸೆ.18- ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಅಕ್ಟೋಬರ್ ಒಂದರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವುದಾಗಿ ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಂಡಳಿಯವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಮುಖ್ಯ ಉಪಾಧ್ಯಕ್ಷ ಎಂ.ಮಾರಪ್ಪ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂದೆ ಸುಮಾರು ಎಂಟು ದಶಕಗಳಿಂದಲೂ ಬೇಡಿಕೆ ಈಡೇರಿಸುವಂತೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಆಡಳಿತ ವರ್ಗಕ್ಕೂ ಹಲವು ಬಾರಿ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2018 ಮಾರ್ಚ್ 19ರಂದು ಅಂದಿನ ಮುಖ್ಯಮಂತ್ರಿಗಳು ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ನೀಡಿದ್ದರೂ ಸಹಾ ಬೇಡಿಕೆ ಈಡೇರಲಿಲ್ಲ. ಹಾಗಾಗಿ ನಾವು ಧರಣಿ ನಡೆಸಲು ತೀರ್ಮಾಣಿಸಿದ್ದೇವೆ ಎಂದು ತಿಳಿಸಿದರು.
ನಾಲ್ಕು ನಿಗಮಗಳ ಎಲ್ಲ ಕಾರ್ಮಿಕರು ಹಾಗೂ ಕುಟುಂಬ ವರ್ಗದವರಿಗೆ ವೈದ್ಯಕೀಯ ಭತ್ಯೆ 10ಸಾವಿರ ರೂ. ನೀಡಬೇಕು. ಪಿಂಚಣಿ ಯೋಜನೆಯನ್ನು ನಮ್ಮ ಕಾರ್ಮಿಕರಿಗೂ ಜಾರಿಗೆ ತರಬೇಕು. 15 ವರ್ಷ ಸೇವೆ ಸಲ್ಲಿಸಿರುವ ಎಲ್ಲಾ ಕಾಮಿರಕರಿಗೂ ಮುಂಬಡ್ತಿ ಸೌಲಭ್ಯ ನೀಡಬೇಕು, ಎಲ್ಲಾ ತರಬೇತಿ ಕಾರ್ಮಿಕರ ತರಬೇತಿ ಕಾಲಾವಧಿಯನ್ನು ಎರಡು ವರ್ಷದಿಂದ 6 ತಿಂಗಳಿಗೆ ಇಳಿಸಬೇಕು ಹಾಗೂ ತಕ್ಷಣ ಕಾಯಂಗೊಳಿಸಬೇಕು. ನಿಗಮದಿಂದ ನಿಗಮಕ್ಕೆ ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ಅವರು ಕೋರಿರುವ ಸ್ಥಳಗಳಿಗೆ ಶೀಘ್ರ ವರ್ಗಾವಣೆ ಮಾಡುವುದೂ ಸೇರಿದಂತೆ ಒಟ್ಟು 15 ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಅ.1ರಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಕಾರ್ಯಾಧ್ಯಕ್ಷ ಎ.ಎಸ್.ರಾಮಣ್ಣ ಉಪಸ್ಥಿತರಿದ್ದರು.