ಬೆಂಗಳೂರು,ಸೆ.17- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ಸರ್ಕಾರ ಬಿದ್ದು ಹೋದರೆ ನಾವು ಕೈ ಕಟ್ಟಿ ಕೂರುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಆಂತರಿಕ ಕಚ್ಚಾಟ ಹಾಗೂ ಭಿನ್ನಾಭಿಪ್ರಾಯದಿಂದ ಸರ್ಕಾರ ಬಿದ್ದು ಹೋದರೇ ಪ್ರತಿಪಕ್ಷವಾಗಿ ಹಾಗೂ ಅತಿ ಹೆಚ್ಚು ಸ್ಥಾನ ಹೊಂದಿರುವ ನಾವು ಪ್ರಜಾಸತ್ತಾತ್ಮಕ ಮಾರ್ಗದಲ್ಲೇ ಸರ್ಕಾರ ರಚಿಸಲು ಸಿದ್ಧರಿದ್ದೇವೆ. ಆದರೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಹೀನ ಕೃತ್ಯಕ್ಕೆ ಪಕ್ಷ ಎಂದೂ ಪ್ರಯತ್ನ ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಕಿಂಗ್ ಪಿನ್ಗಳ ಮೂಲಕ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಕಳ್ಳನ ಮನಸ್ಸು ಹುಳ್ಳಳ್ಳಗೆ ಎಂಬಂತೆ ಎಂದು ವ್ಯಂಗ್ಯವಾಡಿದರು.
ಬಸ್ ಸ್ಟ್ಯಾಂಡ್ನಲ್ಲಿ ಕಳ್ಳತನ ಮಾಡಿದ ಕಳ್ಳ ಓಡಿ ಹೋಗುತ್ತಿದ್ದಾನೆ ಹಿಡಿದುಕೊಡಿ ಎಂದು ಚೀರಿಕೊಂಡಂತಾಗಿದೆ ಕುಮಾರಸ್ವಾಮಿ ಅವರ ಹೇಳಿಕೆ.ಕಿಂಗ್ ಪಿನ್ಗಳು ನಿಮ್ಮ ಅಕ್ಕಪಕ್ಕದಲ್ಲೇ ಇರುವಾಗ ಬೇರೆಯವರ ಮೇಲೆ ಏಕೆ ಗೂಬೆ ಕೂರಿಸುತ್ತೀರಿ ಎಂದು ಪ್ರಶ್ನಿಸಿದರು.
ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಭಿನ್ನಮತ ಅಸಮಾಧಾನ ಹೊಗೆಯಾಡುತ್ತಲೇ ಇತ್ತು.ಇದು ಈಗ ಬೀದಿಗೆ ಬಂದಿದೆ.ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ರಾಜ್ಯದ ಜನತೆ ಸೊಪ್ಪು ಹಾಕುವುದಿಲ್ಲ ಎಂದರು.
ನಿಮ್ಮ ಆಂತರಿಕ ಕಚ್ಚಾಟದ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನೇಕ ಕಡೆ ಪ್ರವಾಹ ಬಂದರೆ, ಹಲವೆಡೆ ಬರಗಾಲ ಆವರಿಸಿದೆ. ಸಚಿವರು ಕಡೆ ಪಕ್ಷ ಜನರ ಸಮಸ್ಯೆಯನ್ನೂ ಆಲಿಸುತ್ತಿಲ್ಲ, ವಿಧಾನಸೌಧಕ್ಕೂ ತಲೆ ಹಾಕುತ್ತಿಲ್ಲ. ಈ ಸರ್ಕಾರ ಪತನವಾಗುವುದನ್ನು ಜನರು ಕಾತುರದಿಂದ ನೋಡುತ್ತಿದ್ದಾರೆ ಎಂದು ಹೇಳಿದರು.
ನಮಗೆ ಜನತೆ ಸ್ಪಷ್ಟ ಜನಾದೇಶ ನೀಡಲಿಲ್ಲ. ಮೊದಲ ಪ್ರಯತ್ನದಲ್ಲಿ ನಾವು ವಿಫಲರಾಗಿ ಜನರ ನಿರೀಕ್ಷೆಗೆ ತಕ್ಕಂತೆ ಪ್ರತಿ ಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇವೆ. ನಾವು ಯಾವ ಆಪರೇಷನ್ ಮಾಡುವ ಅಗತ್ಯವಿಲ್ಲ. ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ ಎನ್ನುವುದಾದರೆ ನಮ್ಮ ಬಳಿ 10 ಶಾಸಕರನ್ನು ಸೆಳೆಯುವ ಸಾಮಥ್ರ್ಯವಿದೆ ಎಂದು ಹೇಳುವ ಕುಮಾರಸ್ವಾಮಿ ಆಪರೇಷನ್ಗೆ ಕೈ ಹಾಕಿದ್ದೀರ ಎಂದು ಪ್ರಶ್ನಿಸಿದರು.
ಶಿವರಾಮ್ ಹೆಬ್ಬಾರ್ ಸೇರಿದಂತೆ ಯಾವುದೇ ಶಾಸಕರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ.ನಾವು ಯಾರನ್ನೋ ಅಪಹರಿಸಿ ಇಲ್ಲವೇ ಕಳ್ಳತನ ಮಾಡಿ ಕರೆತರುವ ಅಗತ್ಯವಿಲ್ಲ. ಕಾಂಗ್ರೆಸ್ ಕಳ್ಳರ ಪಕ್ಷ ಎಂದು ಆ ಪಕ್ಷದವರೇ ಹೇಳಿದ್ದಾರೆ.ಇದೊಂದು ಜನವಿರೋಧಿ ಇಲ್ಲವೇ ದರಿದ್ರ ಪಕ್ಷ ಎಂದು ಮನವರಿಕೆಯಾದರೆ ಯಾರು ತಾನೇ ಉಳಿಯಲು ಸಾಧ್ಯ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನಕ್ಕೆ ಕರೆ:
ಈ ವೇಳೆ ಕಂಠೀರವ ಸ್ಟೇಡಿಯಂನಲ್ಲಿರುವ ವರನಟ ಡಾ.ರಾಜ್ಕುಮಾರ್ ಅವರ ಸಮಾಧಿಗೆ ನಮಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಬಿಬಿಎಂಪಿ ಸದಸ್ಯ ರಾಜೇಂದ್ರಕುಮಾರ್, ಮಾಜಿ ಉಪಮೇಯರ್ ಎಸ್.ಹರೀಶ್, ಹಿರಿಯ ಮುಖಂಡ ಎನ್.ನಾಗರಾಜ್ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಡಿವಿಎಸ್ಗೆ ಸಾಥ್ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛತಾ ಅಭಿಯಾನವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ. ಕಳೆದ ಆ.15ರಿಂದ ಆರಂಭವಾಗಿದ್ದು, ಅ.2ರವರೆಗೆ ನಡೆಯಲಿದೆ.
ದೇಶ ಸ್ವಚ್ಛವಾದರೆ ಅರ್ಧ ಸಮಸ್ಯೆಗಳು ತನ್ನಿಂದ ತಾನೇ ನಿವಾರಣೆಯಾಗುತ್ತದೆ. ಪ್ರಧಾನಿಯವರ ಕರೆಯಂತೆ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಾದ ಬೆಂಗಳೂರು ಉತ್ತರದ ಬ್ಯಾಟರಾಯನಪುರ, ಹೆಬ್ಬಾಳ, ಕೆ.ಆರ್.ಪುರಂ, ಮಹಾಲಕ್ಷ್ಮಿಲೇಔಟ್, ಯಶವಂತಪುರ, ಮಲ್ಲೇಶ್ವರಂ ಮತ್ತಿತರ ಕಡೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಕನಸು ನನಸು ಮಾಡಲು ಕೈ ಜೋಡಿಸುವಂತೆ ಮನವಿ ಮಾಡಿದರು.