ಆಪರೇಷನ್ ಕಮಲಕ್ಕೆ ಒಳಗಾಗಲು ನಾನು ಪೇಷಂಟ್ ಅಲ್ಲ: ಶಾಸಕ ಸುಧಾಕರ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶದಿಂದ ಆಗಮಿಸುತ್ತಿದ್ದಂತೆಯೇ ರಾಜ್ಯ ರಾಜಕಾರನದಲ್ಲಿನ ವಿದ್ಯಮಾನಗಳು ಗರಿಗೆದರಿದ್ದು, ಕಾಂಗ್ರೆಸ್ ನಲ್ಲಿನ ಅಸಮಾಧಾನಿತ ಶಾಸಕರು, ಅಸಚಿವರು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಶಾಸಕ ಸುಧಾಕರ್, ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಪರಮೇಶ್ವರ್ ನಾಯ್ಕ್, ಭೀಮಾ ನಾಯ್ಕ್ ಮೊದಲಾದವರು ಮಾಜಿ ಸಿಎಂ ಅವರನ್ನು ಭೇಟಿಯಾಗಿದ್ದಾರೆ.

ಮಾಜಿ ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಆಪರೇಷನ್ ಕಮಲಕ್ಕೆ ಒಳಗಾಗಲು ನಾನು ಪೇಷಂಟ್ ಅಲ್ಲ. ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನಗಳೂ ಇಲ್ಲ. ನಾನು ಕಟ್ಟಾ ಕಾಂಗ್ರೆಸ್ಸಿಗ. ಸಿದ್ದರಾಮಯ್ಯನವರ ಅನುಯಾಯಿ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದ ಗೊಂದಲದ ಬಗ್ಗೆ ಕೇಳಿದಾಗ, ಉರಿಯುತ್ತಿರುವ ಬೆಂಕಿಗೆ ಮತ್ತೆ ಪೆಟ್ರೋಲ್​ ಸುರಿಯುವುದಿಲ್ಲ. ನಾನು ಬಹಿರಂಗವಾಗಿ ಏನೂ ಹೇಳಿಕೆ ನೀಡಬಾರದು ಎಂದು ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ನಾನು ಅವರ ಅನುಯಾಯಿ ಆಗಿರುವುದರಿಂದ, ನಾನು ಏನಾದರೂ ಹೇಳಿದರೆ ಅವರೇ ಹೇಳಿದ್ದಾರೆ ಎಂದಾಗುತ್ತದೆ ಎಂದರು.

ಇನ್ನು ವಿದೇಶ ಪ್ರವಾಸದಿಂದ ಆಗಮಿಸಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೆ. ಈ ವೇಳೆ ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ಸಿದ್ದರಾಮಣ್ಣನವರ ಬಳಿ ಚರ್ಚೆ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆಗಳನ್ನು ನೀಡಬಾರದು ಎಂದು ಅವರೂ ಸಲಹೆ ನೀಡಿದ್ದಾರೆ. ಲೋಕಸಭೆ ಚುನಾವಣೆಯ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ