ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿ ಸ್ಮಾರ್ಟ್ ಫೆನ್ಸ್ ಉದ್ಘಾಟಿಸಿದ ರಾಜನಾಥ್ ಸಿಂಗ್

ನವದೆಹಲಿ: ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿನ ಉಗ್ರರ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರ್ಟ್ ಫೆನ್ಸ್ ಯೋಜನೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು.

ಉಗ್ರರ ಒಳನುಸುಳುವಿಕೆಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊದಲ ‘ಸ್ಮಾರ್ಟ್ ಬೇಲಿ’ ಇದಾಗಿದ್ದು, ರಾಜನಾಥ್ ಸಿಂಗ್ ಈ ಯೋಜನೆ ಉದ್ಘಾಟಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿನ ತಲಾ 5 ಕಿ.ಮೀ ಉದ್ದದ 2 ಬೇಲಿಗಳನ್ನು ರಾಜನಾಥ್ ಸಿಂಗ್ ಲೋಕಾರ್ಪಣೆಮಾಡಿದರು.

ಜಮ್ಮು ಗಡಿಯ ಮುಂಚೂಣಿ ಪ್ರದೇಶಕ್ಕೆ ತೆರಳಿದ ರಾಜನಾಥ್ ಸಿಂಗ್ ಅವರಿಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಗಳು ಸ್ಮಾರ್ಟ್ ಬೇಲಿಯ ಕಾರ್ಯನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು. 5 ಕಿ.ಮೀ ಉದ್ದದ ಎರಡು ಸ್ಮಾರ್ಟ್ ಫೆನ್ಸ್ ಗಳ ಪೈಕಿ ಒಂದನ್ನು ಸ್ಲೊವೇನಿಯಾದ ಕಂಪನಿ, ಮತ್ತೊಂದನ್ನು ಭಾರತೀಯ ಕಂಪನಿ ಅಭಿವೃದ್ಧಿ ಪಡಿಸಿವೆ.

ಸ್ಮಾರ್ಟ್ ಫೆನ್ಸ್ ತಂತ್ರಜ್ಞಾನ ಆಧರಿತ ಕಣ್ಗಾವಲು ವ್ಯವಸ್ಥೆಯಾಗಿದ್ದು, ಪ್ರಸ್ತುತ ಭಾರತ-ಪಾಕಿಸ್ತಾನ ಗಡಿಯಲ್ಲಿ ನೂರಾರು ಕಿ.ಮೀ ಉದ್ದಕ್ಕೆ ತಂತಿ ಬೇಲಿ ಇದೆ. ಹಿಮಪಾತ ಮತ್ತಿತರೆ ನೈಸರ್ಗಿಕ ಕಾರಣಗಳಿಂದಾಗಿ ಆ ಬೇಲಿ ಸವೆಯುತ್ತದೆ. ಇದಕ್ಕಾಗಿ ನಿರ್ವಹಣಾ ವೆಚ್ಚ ಭರಿಸಬೇಕಾಗುತ್ತದೆ. ಜೊತೆಗೆ ಈ ಬೇಲಿಯ ಮೂಲಕ ಗಡಿಯೊಳಕ್ಕೆ ನುಸುಳುವುದನ್ನು ಉಗ್ರರು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಗಡಿಯಲ್ಲಿ ಮಳೆ, ಚಳಿ, ಗಾಳಿ, ಬಿರುಗಾಳಿ, ಹಿಮಪಾತ ಎನ್ನದೇ ಸರ್ವಋತುಗಳಲ್ಲೂ ಕಣ್ಗಾವಲು ಇಡಲು ಭಾರತ ಕಂಡುಕೊಂಡಿರುವ ವ್ಯವಸ್ಥೆಯೇ ಸ್ಮಾರ್ಟ್ ಫೆನ್ಸ್ ಅರ್ಥಾತ್ ಬೇಲಿ.

ಸರ್ವೇಕ್ಷಣೆ, ಸಂಪರ್ಕ ಹಾಗೂ ದತ್ತಾಂಶ ಸಂಗ್ರಹಕ್ಕೆ ಬೇಕಾದ ಉಪಕರಣಗಳು ಇಲ್ಲಿ ಬಳಕೆಯಾಗಲಿವೆ. ರಾತ್ರಿ ಹೊತ್ತು ವ್ಯಕ್ತಿಗಳ ಚಲನವಲನ ಗುರುತಿಸುವ ಥರ್ಮಲ್ ಇಮೇಜರ್, ಭೂಗತ ಸೆನ್ಸರ್ ಗಳು, ಫೈಬರ್ ಆಪ್ಟಿಕಲ್ ಸೆನ್ಸರ್ ಗಳು, ರಾಡಾರ್, ಸೋನಾರ್ ನಂತಹ ಉಪಕರಣಗಳನ್ನು ಗಡಿಯಲ್ಲಿ ಕಂಬ, ಗೋಪುರ, ಗಾಳಿಯಲ್ಲಿ ತೇಲುವ ಏರೋ ಸ್ಟಾಟ್ ಗಳಿಗೆ ಅಳವಡಿಕೆ ಮಾಡಲಾಗುತ್ತದೆ. ಜೊತೆಗೆ ಸಿಸಿಟಿವಿ ನೇರ ಪ್ರಸಾರ ಬಿಎಸ್ಎಫ್ ನೆಲೆಗೆ ರವಾನೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ