ಬೆಂಗಳೂರು, ಸೆ.16-ನಾಳೆಯಿಂದ ಬಿಬಿಎಂಪಿ ಪಕ್ಷೇತರ ಸದಸ್ಯರಿಗೆ ಗೋವಾ ಪ್ರವಾಸ ಭಾಗ್ಯ…
ಇದೇ 28 ರಂದು ನಡೆಯಲಿರುವ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯರನ್ನು ಬಿಜೆಪಿ ಹೈಜಾಕ್ ಮಾಡಿ ವಿದೇಶ ಪ್ರವಾಸಕ್ಕೆ ಕಳುಹಿಸಲು ಮಾಡಿದ್ದ ಪ್ಲ್ಯಾನ್‍ನ್ನೇ ಉಲ್ಟಾ ಮಾಡಿರುವ ಕಾಂಗ್ರೆಸ್ ಪಕ್ಷ ಎಲ್ಲಾ ಪಕ್ಷೇತರ ಸದಸ್ಯರನ್ನು ಹಿಡಿದಿಟ್ಟುಕೊಂಡು ನಾಳೆಯೇ ಗೋವಾ ಪ್ರವಾಸಕ್ಕೆ ಅಥವಾ ಅಜ್ಞಾತ ಸ್ಥಳಕ್ಕೆ ಕಳುಹಿಸಲು ಏರ್ಪಾಡು ಮಾಡಿದೆ.
ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಪಕ್ಷೇತರ ಸದಸ್ಯರನ್ನು ವಿದೇಶಕ್ಕೆ ಕರೆದೊಯ್ದು ಚುನಾವಣೆ ನಡೆಯುವ ಹಿಂದಿನ ದಿನ ಅಂದರೆ 27 ರಂದು ಕರೆತರುವ ಯೋಜನೆ ರೂಪಿಸಲಾಗಿತ್ತಾದರೂ ಸಮಯಾವಕಾಶದ ಕೊರತೆ ಇರುವುದರಿಂದ ಗೋವಾ ಅಥವಾ ಬೇರೆ ಕಡೆ ಕರೆದೊಯ್ಯಲು ತೀರ್ಮಾನಿಸಲಾಗಿದ್ದು, ನಾಳೆಯೇ 7 ಪಕ್ಷೇತರ ಸದಸ್ಯರ ಪೈಕಿ ಸಿದ್ದಾಪುರ ವಾರ್ಡ್‍ನ ಮುಜಾಹಿದ್ದೀನ್ ಪಾಷ ಹೊರತು ಪಡಿಸಿ ಉಳಿದ ಆರು ಪಕ್ಷೇತರ ಸದಸ್ಯರು ಪ್ರವಾಸ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆಯಿಂದ 27ರವರೆಗೆ ಪ್ರವಾಸದಲ್ಲಿರುವ ಅವರು 28 ರಂದು ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಆಗಮಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲಿದ್ದಾರೆ.
ಕಳೆದ 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ 100 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪಕ್ಷೇತರರ ಸಹಕಾರದೊಂದಿಗೆ ಅಧಿಕಾರ ಹಿಡಿದೇ ಬಿಟ್ಟೆವು ಎಂಬ ಉತ್ಸಾಹದಲ್ಲಿತ್ತು. ಆದರೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಲೆಕ್ಕಾಚಾರವೇ ಬೇರೆಯಾಗಿತ್ತು. ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿ ಪಕ್ಷೇತರರನ್ನು ತಮ್ಮತ್ತ ಸೆಳೆದು ಅಧಿಕಾರ ಹಿಡಿಯಲು ಮುಂದಾಗಿದ್ದರು. ತಡಮಾಡದೆ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರನ್ನು ಶಾಸಕರ ನೇತೃತ್ವದಲ್ಲಿ ಮಡಿಕೇರಿ ಮತ್ತು ಗೋವಾ ರೆಸಾರ್ಟ್‍ಗೆ ಕಳುಹಿಸಲಾಯಿತು.
ಚುನಾವಣೆ ನಡೆಯುವ ಸಂದರ್ಭದಲ್ಲಿ ಕರೆತಂದು ಬಿಬಿಎಂಪಿ ಅಧಿಕಾರ ಹಿಡಿಯಲಾಯಿತು. ಹೆಚ್ಚು ಸ್ಥಾನ ಪಡೆದ ಬಿಜೆಪಿ ಅಧಿಕಾರದಿಂದ ವಂಚಿತವಾಯಿತು. ಈ ಬಾರಿ ಆಡಳಿತಾರೂಢ ಜೆಡಿಎಸ್, ಕಾಂಗ್ರೆಸ್ ಮೈತ್ರಿಯನ್ನು ಮುರಿದು ಪಕ್ಷೇತರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಧಿಕಾರ ಹಿಡಿಯುವ ಪ್ಲ್ಯಾನ್ ಅನ್ನು ಬಿಜೆಪಿ ರೂಪಿಸಿತ್ತು. ಇದನ್ನು ಮೊದಲೇ ಅರಿತ ಕಾಂಗ್ರೆಸ್ ಪಕ್ಷೇತರ ಸದಸ್ಯರನ್ನು ಪ್ರವಾಸ ಕಳುಹಿಸುವ ಏರ್ಪಾಡು ಮಾಡಿದೆ. ನಾಳೆಯೇ ಎಲ್ಲ ಆರು ಪಕ್ಷೇತರ ಸದಸ್ಯರು ರೆಸಾರ್ಟ್‍ಗೆ ತೆರಳಲಿದ್ದಾರೆ.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ 259 ಮತದಾರರಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು 130 ಸರಳ ಬಹುಮತವಾಗಿದೆ. ಪಾಲಿಕೆ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಬಿಜೆಪಿ 123 ಸದಸ್ಯ ಬಲ ಹೊಂದಿದೆ. 7 ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ ಅಧಿಕಾರ ಹಿಡಿಯಬಹುದಾಗಿದೆ. ಆದರೆ ಪಕ್ಷೇತರರ ಪೈಕಿ ಈಗಾಗಲೇ ಒಬ್ಬರು ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಕಾಂಗ್ರೆಸ್ ಕಡೆಗೆ ಬಂದಿದ್ದಾರೆ. ಇನ್ನಿಬ್ಬರು ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ 128 ಸದಸ್ಯ ಬಲವಿದ್ದು, ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ ಸುಲಭವಾಗಿ ಅಧಿಕಾರ ಹಿಡಿಯಬಹುದಾಗಿದೆ. ಆದರೆ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚುನಾವಣೆ ನಡೆಯುವವರೆಗೂ ಒಗ್ಗಟ್ಟು ಕಾಪಾಡಿಕೊಳ್ಳಲು ಎರಡು ಪಕ್ಷಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿವೆ.
ಕಾಂಗ್ರೆಸ್ ಪಕ್ಷ ಪಕ್ಷೇತರರ ಬೆಂಬಲ ಪಡೆಯಲು ಅವರನ್ನು ರೆಸಾರ್ಟ್‍ಗೆ ಕರೆದೊಯ್ಯಲು ನಿರ್ಧರಿಸಿದೆ. ಈಗಾಗಲೇ ರಾಮಲಿಂಗಾರೆಡ್ಡಿ, ದಿನೇಶ್‍ಗುಂಡೂರಾವ್, ಕೆ.ಜೆ.ಜಾರ್ಜ್, ನಗರದ ಶಾಸಕರು ಪಕ್ಷೇತರರೊಂದಿಗೆ ಸಭೆ ನಡೆಸಿ ಅವರ ಮನವೊಲಿಸಿದ್ದಾರೆ.