ಬೆಂಗಳೂರು,ಸೆ.16- ನಿರಂತರವಾಗಿ ಏರುತ್ತಿರುವ ತೈಲ ಬೆಲೆಯಿಂದ ಜನರು ಬೇಸತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕಡಿಮೆ ಮಾಡಲು ಚಿಂತನೆ ನಡೆಸಿದ್ದು, ಪ್ರತಿ ಲೀಟರ್ಗೆ 2ರಿಂದ 3 ರೂ. ಇಳಿಸುವ ಸಾಧ್ಯತೆಗಳಿವೆ.
ಈ ಸಂಬಂಧ ರಾಜ್ಯ ಸರ್ಕಾರ ನಾಳೆ ಅಧಿಕೃತ ಆದೇಶ ಹೊರಡಿಸುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಲು ನಿರಾಕರಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಆಂಧ್ರಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ನ್ನು ಕಡಿತ ಮಾಡುವ ಮೂಲಕ ದರ ಏರಿಕೆ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಇದೇ ಕ್ರಮವನ್ನು ಅನುಸರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೆಸ್ ಕಡಿಮೆ ಮಾಡುವ ಬಗ್ಗೆ ಸಿಎಂ ಸುಳಿವು ನೀಡಿದ್ದರು. ಸದ್ಯದಲ್ಲೇ ಆದೇಶ ನೀಡುವ ಭರವಸೆ ನೀಡಿದ್ದರು.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ 84 ರೂ. ದಾಟಿದ್ದು, ಡೀಸೆಲ್ 75 ರೂ. ಆಗಿದೆ. ನಿರಂತರ ಬೆಲೆ ಏರಿಕೆಯಾಗುತ್ತಲೇ ಇದ್ದು ದೇಶಾದ್ಯಂತ ಬಂದ್, ಪ್ರತಿಭಟನೆ ನಡೆಸಲಾಗಿತ್ತು. ಭಾರತ್ ಬಂದ್ಗೆ ಕರೆ ನೀಡಿದ್ದ ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ಕೂಡ ದೊರೆತಿತ್ತು. ಆದರೂ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆನಂತರವೂ ತೈಲ ಬೆಲೆ ನಿರಂತರ ಏರಿಕೆಯಾಗುತ್ತಲೇ ಇದೆ.
ತೈಲ ಬೆಲೆ ಏರಿಕೆಯಿಂದ ಇನ್ನಿತರ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗುತ್ತಿದೆ. ಇದನ್ನು ಮನಗಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೈಲ ಬೆಲೆ ಮೇಲಿನ ಸೆಸ್ ಇಳಿಸುವ ಸಂಬಂಧ ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸದ್ಯದಲ್ಲೇ ಆದೇಶ ಹೊರಡಿಸಲಿದ್ದಾರೆ.