ಬೆಂಗಳೂರು, ಸೆ.16- ಬಿಲ್ ನೀಡದೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ನಗರದ ನಗರ್ತಪೇಟೆಯ ಚಿನ್ನಾಭರಣ ಮಳಿಗೆ ಹಾಗೂ ಮನೆಯೊಂದರ ಮೇಲೆ ಇಂದು ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಚಿನ್ನಾಭರಣ, ದಾಖಲೆ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ನಗರ್ತಪೇಟೆಯ ಧರ್ಮರಾಯ ದೇವಾಲಯದ ಸಮೀಪದ ನಿವಾಸಿ ಅಜ್ಗರ್ ಅಲಿ ಎಂಬವರ ಮಳಿಗೆ ಮತ್ತು ಮನೆಗೆ ದಾಳಿ ಮಾಡಿದ ಐಟಿ ವಿಭಾಗದ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು, ಮನೆಯಲ್ಲಿ ಶೋಧ ನಡೆಸಿದ್ದಾರೆ. ಬಳಿಕ ದಾಖಲೆಗಳೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಹಕರಿಗೆ ಬಿಲ್ ಪಾವತಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳ ತಂಡ ಮಳಿಗೆಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ಈ ವೇಳೆ ಹಲವು ಗ್ರಾಹಕರಿಗೆ ಬಿಲ್ ನೀಡದೆ, ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕರ್ನಾಟಕ ಮತ್ತು ಗೋವಾ ವೃತ್ತದ ಐಟಿ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಇವರು ಮನೆಯಲ್ಲೇ ಚಿನ್ನಾಭರಣ ಮಾರಾಟ ಮಾಡುತ್ತಿದ್ದರು. ಮನೆಯಲ್ಲೇ ಚಿನ್ನಕ್ಕೆ ಪಾಲಿಶ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.