ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಬಿಜೆಪಿಯ ತೆರೆಮರೆಯ ಕಸರತ್ತುಗಳನ್ನು ಸಿಎಂ ಕುಮಾರಸ್ವಾಮಿ ಹದ್ದಿನ ಕಣ್ಣಿಡುವ ಮೂಲಕ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಪತಕ್ಕೆ ಬಿಜೆಪಿ ರೂಪಿಸಿದ್ದ ಆಪರೇಷನ್ ಕಮಲದ ಜಾಲವನ್ನು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಮಟ್ಟಹಾಕುವಲ್ಲಿ ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ಗೃಹ ಇಲಾಖೆಯನ್ನು ಪರಮೇಶ್ವರ್ ಅವರಿಗೆ ನೀಡಿದ್ದರು ಸಹ ಗುಪ್ತಚರ ಇಲಾಖೆಯನ್ನು ಮಾತ್ರ ತಮ್ಮ ಬಳಿಯೇ ಸಿಎಂ ಕುಮಾರರಸ್ವಾಮಿ ಉಳಿಸಿಕೊಂಡಿದ್ದರು. ಇದೇ ಗುಪ್ತಚರ ಇಲಾಖೆಯ ಮೂಲಕ ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದರು. ಇದಕ್ಕಾಗಿ ನುರಿತ ಪೊಲೀಸರ ಬಳಕೆ ಮಾಡಿಕೊಂಡಿದಲ್ಲದೇ, ನಿವೃತ್ತಿ ಹೊಂದಿದ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂಬುದರ ಖಚಿತ ಮಾಹಿತಿ ಸಿಕ್ಕಿದೆ.
ಈಗಾಗಲೇ ಅಧಿಕಾರಿಗಳು ಬಿಜೆಪಿ ನಾಯಕರ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದರು. ಹೀಗಾಗಿಯೇ ಕುಮಾರಸ್ವಾಮಿಯವರು ಇತ್ತೀಚೆಗೆ ಕಿಂಗ್ಪಿನ್ಗಳ ಮಾಹಿತಿಯನ್ನು ಪರೋಕ್ಷವಾಗಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಅಲ್ಲದೇ ಗುಪ್ತಚರ ಇಲಾಖೆಯು ಆಪರೇಷನ್ ಕಮಲದ ಕಿಂಗ್ಪಿನ್ಗಳು ಯಾರು? ಈ ಹಿಂದೆ ಅವರ ಮೇಲೆ ಯಾವ ಯಾವ ಕೇಸುಗಳೆ ಇವೆ? ಎಂಬುದನ್ನು ಸಹ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.