ಬೆಂಗಳೂರು, ಸೆ.15-ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಬಿಎಂಪಿಯಲ್ಲೂ ಪಕ್ಷೇತರರ ನೆರವು ಪಡೆದು ಈ ಬಾರಿ ಹೇಗಾದರೂ ಅಧಿಕಾರ ಹಿಡಿಯಬೇಕೆಂದು ನಡೆಸಿದ ಭಾರೀ ಪ್ರಯತ್ನ ವಿಫಲವಾಗಿದೆ.
ಪಕ್ಷೇತರರನ್ನು ತನ್ನತ್ತ ಸೆಳೆದು ಮೇಯರ್-ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಅವರನ್ನು ವಿದೇಶಕ್ಕೆ ಟೂರ್ ಕಳುಹಿಸಿ ಗೈರು ಹಾಜರಾಗುವಂತೆ ನೋಡಿಕೊಂಡು ಪಾಲಿಕೆಯ ಅಧಿಕಾರ ಕಬ್ಜಾ ಮಾಡುವ ಬಗ್ಗೆ ಬಿಜೆಪಿ ನಿನ್ನೆ ತಡರಾತ್ರಿವರೆಗೂ ಮಹತ್ವದ ಸಭೆ ನಡೆಸಿದೆ.
ನಗರದ ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ನಿವಾಸದಲ್ಲಿ ಪಕ್ಷೇತರರೊಂದಿಗೆ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅಧಿಕಾರ ಹಂಚಿಕೆ ಬಗ್ಗೆ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ಲಾನ್ ಫ್ಲಾಪ್ ಆಗಿದೆ.
ಇನ್ನೇನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳುತ್ತದೆ. ಬಿಬಿಎಂಪಿಯಲ್ಲೂ ನಮ್ಮದೇ ಅಧಿಕಾರ ಪ್ರತಿಷ್ಠಾಪಿಸಬಹುದು ಎಂಬ ಹಿನ್ನೆಲೆಯಲ್ಲಿ ಪಕ್ಷೇತರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಬಿಬಿಎಂಪಿಯ ಏಳು ಜನ ಪಕ್ಷೇತರ ಸದಸ್ಯರು, ಉಪಮೇಯರ್ ನಗರ ಯೋಜನಾ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿಗಳ ಅಧಿಕಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಮೊದಲು ಚುನಾವಣೆಗೆ ಸಹಕರಿಸಿ ನಂತರ ಅಧಿಕಾರ ಹಂಚಿಕೆಯ ಮಾತುಗಳನ್ನಾಡೋಣ ಎಂದು ನಾಯಕರು ಹೇಳಿದ್ದಾರೆ. ಪಕ್ಷೇತರರ ಬೇಡಿಕೆಗಳಿಗೆ ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿಲ್ಲ. ನೂರು ಸದಸ್ಯಬಲವುಳ್ಳ ನಮ್ಮ ಪಕ್ಷ ಏಳು ಸದಸ್ಯರಿಗೆ ಅಧಿಕಾರ ನೀಡುವುದು ಎಷ್ಟು ಸಮಂಜಸ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಕ್ಷೇತರರೊಂದಿಗೆ ಬಿಜೆಪಿಯವರು ಸಭೆ ನಡೆಸುತ್ತಿದ್ದಾರೆ ಎಂಬ ಸುಳಿವರಿತ ಕಾಂಗ್ರೆಸ್ನ ಪ್ರಭಾವಿ ಮುಖಂಡರಾದ ರಾಮಲಿಂಗಾರೆಡ್ಡಿ ಅವರು ನಿನ್ನೆ ರಾತ್ರಿಯೇ ಅಖಾಡಕ್ಕಿಳಿದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಪಕ್ಷೇತರರನ್ನೆಲ್ಲ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದಾರೆ. ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ ಎಂದಿನಂತೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಪಕ್ಷೇತರ ಸದಸ್ಯರು ರಾಮಲಿಂಗಾರೆಡ್ಡಿ ಅವರ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಪಕ್ಷೇತರರೆಲ್ಲರಿಗೂ ಅಧಿಕಾರ ನೀಡಲಾಗಿತ್ತು. ಎರಡನೆ ವರ್ಷ ಕೇವಲ ಮೂರ್ನಾಲ್ಕು ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತೆ ಮೂರು ಜನರಿಗೆ ಮಾತ್ರ ಅಧಿಕಾರ ನೀಡಲಾಗಿತ್ತು. ನಮ್ಮನ್ನು ನಿರ್ಲಕ್ಷಿಸಲಾಗಿದೆ, ಅಲ್ಲದೆ ನಮಗೆ ನೀಡಿದ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಕೂಡ ಮೊಟಕುಗೊಳಿಸಲಾಗಿದೆ. ನಮಗೆ ಸಮಾನ ಅಧಿಕಾರದ ಅವಕಾಶ, ವಿಶೇಷ ಅನುದಾನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ರಾಮಲಿಂಗಾರೆಡ್ಡಿ, ಮೇಯರ್ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಬಿಬಿಎಂಪಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ. ಕಾಂಗ್ರೆಸ್ ಪಕ್ಷದವರು ಮೇಯರ್ ಆಗಲಿದ್ದು, ಜೆಡಿಎಸ್ ಪಕ್ಷದವರು ಉಪಮೇಯರ್ ಆಗಲಿದ್ದಾರೆ. ಪಕ್ಷೇತರರಿಗೆ ಹೆಚ್ಚಿನ ಅಧಿಕಾರ ಸಿಗುವ ಸಾಧ್ಯತೆ ಇದೆ.
ಒಟ್ಟಾರೆ ಪಕ್ಷೇತರರೊಂದಿಗೆ ಸೇರಿ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ನಡೆಸಲು ರೂಪಿಸಿದ್ದ ಫಾಸ್ಟ್ ಮಾಸ್ಟರ್ ಪ್ಲಾನ್ವೊಂದು ಅಷ್ಟೇ ಫಾಸ್ಟ್ ಆಗಿ ಫ್ಲಾಪ್ ಆಗಿದೆ.