ಬೆಂಗಳೂರು, ಸೆ.15-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸ ಮುಗಿಸಿ ನಾಳೆ ಬೆಂಗಳೂರಿಗೆ ವಾಪಸ್ ಬರುತ್ತಿದ್ದು, ರಾಜಕೀಯ, ಕಾಂಗ್ರೆಸ್ ಪಾಳಯದಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ.
ಸೆಪ್ಟೆಂಬರ್ 3 ರಂದು ವಿದೇಶಿ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಹಲವಾರು ಬೆಳವಣಿಗೆಗಳಾಗಿವೆ. ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ರಮೇಶ್ ಜಾರಕಿ ಹೊಳಿ ಹಾಗೂ ಶಾಸಕ ಸತೀಶ್ ಜಾರಕಿ ಹೊಳಿ ಅವರು ಬಂಡಾಯದ ಬಾವುಟ ಹಿಡಿದು ಸಮ್ಮಿಶ್ರ ಸರ್ಕಾರದ ವಿರುದ್ಧ ಸಮರ ಸಾರಿ 14ಕ್ಕೂ ಹೆಚ್ಚು ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ. ಪಕ್ಷದಲ್ಲಿ ನಮಗೆ ಮನ್ನಣೆ ಸಿಗದಿದ್ದರೆ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂಬ ಅರ್ಥದಲ್ಲಿ ಜಾರಕಿ ಹೊಳಿ ಸಹೋದರರು ಕಾರ್ಯಾಚರಣೆ ನಡೆಸಿದ್ದರು. ಇದು ಕೆಲ ಕಾಲ ಆತಂಕವನ್ನು ಮೂಡಿಸಿತ್ತು.
ಜಾರಕಿ ಹೊಳಿ ಸಹೋದರರ ಹೆಚ್ಚಾದ ಗದ್ದಲದ ನೆರಳಿನಲ್ಲಿ ಬಿಜೆಪಿ ಸದ್ದಿಲ್ಲದಂತೆ ಆಪರೇಷನ್ ಕಮಲಕ್ಕೆ ಕೈ ಹಾಕಿ ಸುಮಾರು 23ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿತ್ತು. ಆಪರೇಷನ್ ಕಮಲಕ್ಕೆ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ರೌಡಿಶೀಟರ್‍ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಬಳಕೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಾರಕಿ ಹೊಳಿ ಸಹೋದರರ ಬಂಡಾಯವನ್ನು ಶಮನ ಮಾಡುವ ಪ್ರಯತ್ನದಲ್ಲಿದ್ದಾಗ ಅತ್ತ ಬಿಜೆಪಿ ಸದ್ದಿಲ್ಲದೆ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿತ್ತು. ಇದರ ಸುಳಿವರಿತ ಜಾರಕಿ ಹೊಳಿ ಸಹೋದರರು ತಮ್ಮ ನಡೆಯಿಂದ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಹಾನಿಯಾಗುವುದನ್ನು ಅರಿತು ಸದ್ದಿಲ್ಲದೆ ಬೆಂಗಳೂರಿನಿಂದ ಹೊರಟು ಬೆಳಗಾವಿ ಸೇರಿಕೊಂಡರು.
ಆದರೂ ಅವರ ಅಸಮಾಧಾನ ಇನ್ನೂ ಪೂರ್ತಿ ತಣ್ಣಗಾಗಿಲ್ಲ. ಬೂದಿ ಮುಚ್ಚಿದ ಕೆಂಡದಂತಿರುವ ಜಾರಕಿ ಹೊಳಿ ಸಹೋದರರ ಭಿನ್ನಮತವನ್ನು ತಣಿಸಲು ಕಾಂಗ್ರೆಸ್ ಎಲ್ಲಾ ನಾಯಕರು ಸರತಿ ಸಾಲಿನಲ್ಲಿ ಸಭೆಗಳ ಮೇಲೆ ಸಭೆ ನಡೆಸಿದ್ದಾರೆ. ಯಾರ ಮಾತಿಗೂ ಕ್ಯಾರೆ ಎನ್ನದ ಜಾರಕಿ ಹೊಳಿ ಸಹೋದರರು ಸಿದ್ದರಾಮಯ್ಯ ಅವರ ಜೊತೆಗಿನ ಮಾತುಕತೆಗಾಗಿ ಕಾದು ಕುಳಿತಿದ್ದಾರೆ.
ನಾಳೆ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಬಂದ ನಂತರ ಜಾರಕಿ ಹೊಳಿ ಸಹೋದರರೊಂದಿಗೆ ಮುಖಾಮುಖಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಸಿದ್ದು ಸಂಧಾನ ಯಶಸ್ವಿಯಾಗಿ ಜಾರಕಿ ಸಹೋದರರು ತಣ್ಣಗಾದರೆ ಸಮ್ಮಿಶ್ರ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ಹೊಸ ವಿವಾದ, ಹೊಸ ಭಿನ್ನಮತ ಎದುರಾಗುವವರೆಗೂ ಕುಮಾರಸ್ವಾಮಿ ಸರ್ಕಾರ ನಿಶ್ಚಿಂತೆಯಿಂದಿರಬಹುದು.
ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹೊರಗಡೆ ಹೋದಾಗಲೆಲ್ಲ ಸಮ್ಮಿಶ್ರ ಸರ್ಕಾರಕ್ಕೆ ಒಂದಲ್ಲ ಒಂದು ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಲೇ ಇದೆ. ಈ ಹಿಂದೆ ಧರ್ಮಸ್ಥಳಕ್ಕೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆಯುವ ವೇಳೆ ಸಿದ್ದು ಪರಮಾಪ್ತರಾದ ಎಂ.ಬಿ.ಪಾಟೀಲ್ ಬಂಡಾಯದ ಬಾವುಟ ಹಿಡಿದು ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದಾಗ ಜಾರಕಿ ಹೊಳಿ ಸಹೋದರರು ಚುರುಕಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಿದ್ದು ಗೈರು ಹಾಜರಿ ಮತ್ತು ಕಾಂಗ್ರೆಸ್‍ನ ಭಿನ್ನಮತೀಯ ಚಟುವಟಿಕೆಗಳು ಕಾಕತಾಳೀಯವಾದರೂ ಸಮ್ಮಿಶ್ರ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿವೆ.