ನವದೆಹಲಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಈ ನಡುವೆ ಗೋವಾದ ಪರ್ಯಾಯ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಹುಡುಕುತ್ತಿದೆ ಎಂದು ತಿಳಿದು ಬಂದಿದೆ.
18 ತಿಂಗಳಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿರುವ ಪರಿಕ್ಕರ್ ಸೆಪ್ಟೆಂಬರ್ ಮೊದಲ ವಾರವಷ್ಟೆ ಅಮೆರಿಕದಿಂದ ಚಿಕಿತ್ಸೆ ಪಡೆದು ವಾಪಸಾಗಿದ್ದರು. ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪರಿಕ್ಕರ್, ಸಿಎಂ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸೋಮವಾರ ಗೋವಾಕ್ಕೆ ತಂಡವನ್ನು ಕಳುಹಿಸಿ ಮುಂದಿನ ಸಿಎಂ ಆಯ್ಕೆ ನಡೆಸಲಿದೆ ಎನ್ನಲಾಗಿದ್ದು, ಪರಿಕ್ಕರ್ ಸ್ಥಾನಕ್ಕೆ ರಾಮಕೃಷ್ಣ ಧಾವಾಲಿಕರ್ ಅವರನ್ನು ನೇಮಕ ಮಾಡಲು ಬಿಜೆಪಿ ರಾಷ್ಟ್ರ ನಾಯಕರು ಚಿಂತನೆ ನಡೆಸಿದ್ದಾರೆ.
ಗೋವಾದ ಕಾಂಡೊಲಿನ್ ಆಸ್ಪತ್ರೆಯಲ್ಲಿ ಶುಕ್ರವಾರ ಸಚಿವ ಸಂಪುಟದ ಜತೆ ಪರಿಕ್ಕರ್ ಈ ಕುರಿತು ಸಭೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.