ಬೆಂಗಳೂರು, ಸೆ.14- 2008ರಲ್ಲಿ ಮೂರು ಸ್ಥಾನ ಕೊರತೆ ತುಂಬಿಕೊಳ್ಳಲು ಅನುಸರಿಸಿದ್ದ ತಂತ್ರಗಾರಿಕೆಯನ್ನೇ ಮತ್ತೆ ಅನುಸರಿಸಲು ಬಿಜೆಪಿ ಮುಂದಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ಅಖಾಡಕ್ಕಿಳಿದು ಆಪರೇಷನ್ ಕಮಲದ ಉಸ್ತುವಾರಿಗೆ ಮುಂದಾಗಲಿದ್ದಾರೆ..?
ಅನಂತ್ ಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಆಪರೇಷನ್ ಕಮಲದಿಂದ ಅಂತರ ಕಾಯ್ದುಕೊಂಡಿದ್ದರೆ, ಸರ್ಕಾರ ರಚನೆಯ ಚಿಂತನೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಇದೀಗ ಯಡಿಯೂರಪ್ಪನವರ ನೆರವಿಗೆ ಈ ಹಿಂದೆ ಇದ್ದ ರೆಡ್ಡಿ, ರಾಮುಲು ಜೋಡಿ ನಿಂತಿದೆ ಎನ್ನುವ ಮಾತುಗಳು ಕೇಸರಿ ಪಾಳಯದಿಂದಲೇ ಕೇಳಿಬಂದಿವೆ.
ಸರ್ಕಾರ ರಚನೆ ಸಾಧ್ಯವಾದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಶ್ವಾಸನೆಯನ್ನು ಚುನಾವಣಾ ಪೂರ್ವದಲ್ಲೇ ಶ್ರೀರಾಮುಲುಗೆ ನೀಡಲಾಗಿತ್ತು. ಈಗಲೂ ಅದೇ ಅವಕಾಶದ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಆಪ್ತಮಿತ್ರನಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೇರುವ ಅವಕಾಶ ಸಿಗುತ್ತದೆ ಎನ್ನುವ ಕಾರಣಕ್ಕೆ ಶ್ರೀರಾಮುಲು ಜೊತೆ ಜನಾರ್ದನ ರೆಡ್ಡಿ ಕೈ ಜೋಡಿಸಿದ್ದು, ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಲ್ಲಿನ ಅತೃಪ್ತ ಶಾಸಕರನ್ನು ಸೆಳೆಯಲು ರೆಡ್ಡಿ, ಶ್ರೀರಾಮುಲು ತಂತ್ರ ರೂಪಿಸುತ್ತಿದ್ದು, ಬೆಂಗಳೂರಿನಿಂದ ದೂರವಿರುವ ಖಾಸಗಿ ರೆಸಾರ್ಟ್ನಲ್ಲಿ ಬೀಡುಬಿಟ್ಟು ಆಪರೇಷನ್ ಕಮಲದ ಭಾಗವಾಗಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಶ್ರೀರಾಮುಲು ಕೂಡ ಬಹಿರಂಗವಾಗಿ ಕಾಣಿಸಿಕೊಳ್ಳದೇ ರೆಡ್ಡಿ ಜೊತೆ ಆಪರೇಷನ್ ಕಮಲದ ಸ್ಕೆಚ್ ಹಾಕುತ್ತಿದ್ದಾರೆ.
ತೆರೆಮೆರೆಯಲ್ಲಿದ್ದುಕೊಂಡೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದಕ್ಕೆ ಬೇಕಾದ ನೆರವನ್ನು ಕೂಡ ಜನಾರ್ದನ ರೆಡ್ಡಿ ನೀಡಲಿದ್ದಾರೆ. 2008 ರಲ್ಲಿ ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡ ರೀತಿಯಲ್ಲಿಯೇ ಈ ಬಾರಿಯೂ ವಹಿಸಿಕೊಂಡು ಬಿಎಸ್?ವೈ ಬೆಂಬಲಕ್ಕೆ ನಿಂತು ಆಪ್ತಮಿತ್ರನಿಗೆ ಡಿಸಿಎಂ ಪಟ್ಟ ಸಿಗುವಂತೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.