ಬೆಂಗಳೂರು, ಸೆ.14-ಬೆಳಗಾವಿ ಜಿಲ್ಲೆಯ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಜಿಲ್ಲೆಯನ್ನು ಮೂರು ಭಾಗಗಳನ್ನಾಗಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ್ ಪ್ರದೇಶವನ್ನು ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಈ ಸಂಬಂಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಈ ಸಮಿತಿ ನೀಡುವ ವರದಿ ನಂತರ ಬೆಳಗಾವಿಯನ್ನು ಮೂರು ಜಿಲ್ಲೆಯನ್ನಾಗಿ ವಿಭಾಗಿಸಿ ಬೆಳಗಾವಿ, ಗೋಕಾಕ್ ಮತ್ತು ಚಿಕ್ಕೋಡಿಯನ್ನು ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತ ದೃಷ್ಟಿಯಿಂದ ಜಿಲ್ಲೆಯನ್ನು ವಿಭಾಗಿಸುವುದು ಮತ್ತು ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಜಾರಕಿ ಹೊಳಿ ಸಹೋದರರಿಗೂ ಈ ಮೂಲಕ ಕಡಿವಾಣ ಹಾಕುವುದು ಇದರ ಮೂಲ ಉದ್ದೇಶವಾಗಿದೆ.
ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಜನಸಂಖ್ಯೆ ಹಾಗೂ ಕ್ಷೇತ್ರವಾರುವಿನಲ್ಲಿ ಬೆಳಗಾವಿ ರಾಜ್ಯದಲ್ಲೇ 2ನೇ ಅತಿ ದೊಡ್ಡ ಜಿಲ್ಲೆ ಎನಿಸಿದೆ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದರೆ, ಕುಂದಾನಗರಿ 18 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ.
ಬೆಳಗಾವಿಗೆ 6, ಚಿಕ್ಕೋಡಿಗೆ 6 ಹಾಗೂ ಗೋಕಾಕ್ 6 ವಿಧಾನಸಭಾ ಕ್ಷೇತ್ರಗಳನ್ನಾಗಿ ವಿಂಗಡಿಸುವ ಮೂಲಕ ಮೂರು ಜಿಲ್ಲೆಯನ್ನಾಗಿ ಘೋಷಿಸಿದರೆ ಅಭಿವೃದ್ಧಿಗೂ ಅನುಕೂಲ ಹಾಗೂ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಜಾರಕಿ ಹೊಳಿ ಸಹೋದರರಿಗೆ ಈ ಮೂಲಕ ಕಡಿವಾಣ ಹಾಕಿದಂತಾಗುತ್ತದೆ ಎಂಬ ಲೆಕ್ಕಾಚಾರವಾಗಿದೆ.
ಬೆಳಗಾವಿಯನ್ನು ಈ ಹಿಂದೆಯೇ ವಿಭಾಗಿಸಿ ಮೂರು ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಬೇಡಿಕೆ ಬಹುದಿನಗಳಿಂದಲೂ ಕೇಳಿ ಬಂದಿತ್ತು. ಆದರೆ ಜಿಲ್ಲೆಯಲ್ಲಿ ಮರಾಠಿಗರ ಪ್ರಾಬಲ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಜಿಲ್ಲೆಯನ್ನು ವಿಭಾಗಿಸುವುದು ಸರಿಯಲ್ಲ ಎಂದು ಕನ್ನಡಪರ ಸಂಘಟನೆಗಳು, ಸಾಹಿತಿಗಳು ಸೇರಿದಂತೆ ಮತ್ತಿತರರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಜಿಲ್ಲೆಯನ್ನು ವಿಭಾಗಿಸಿದರೆ ಮರಾಠಿಗರ ಪ್ರಾಬಲ್ಯ ಹೆಚ್ಚಳವಾಗಿ ಕನ್ನಡ ಭಾಷೆ ಇನ್ನಷ್ಟು ಕ್ಷೀಣಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಜಿಲ್ಲೆಯಲ್ಲಿ ಸಹೋದರರ ಪ್ರಭಾವಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಬೆಳಗಾವಿಯನ್ನು ವಿಭಾಗಿಸಿದರೆ ರಾಜ್ಯದ 31ನೆ ಜಿಲ್ಲೆಯಾಗಿ ಚಿಕ್ಕೋಡಿ ಮತ್ತು 32ನೆ ಜಿಲ್ಲೆಯಾಗಿ ಗೋಕಾಕ್ ಘೋಷಣೆಯಾಗಲಿದೆ. ಈ ಹಿಂದೆ ಕಲಬುರಗಿಯಿಂದ ಯಾದಗಿರಿಯನ್ನು ವಿಭಾಗಿಸಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲಾಗಿತ್ತು.
ಯಾವ ಕ್ಷೇತ್ರ ಯಾವ ಜಿಲ್ಲೆಗೆ:
ಗೋಕಾಕ್:
ಗೋಕಾಕ್, ರಾಮದುರ್ಗ, ಅರಭಾವಿ, ಯಮಕನಮರಡಿ, ಸವದತ್ತಿ, ಬೈಲಹೊಂಗಲ.
ಚಿಕ್ಕೋಡಿ:
ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ಹುಕ್ಕೇರಿ, ಕುಡಚಿ
ಬೆಳಗಾವಿ:
ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಖಾನಾಪುರ, ಕಿತ್ತೂರು