ನವದೆಹಲಿ: ಇಸ್ರೋ ವಿಜ್ಞಾನಿಯ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪುನೀಡಿರುವ ಸುಪ್ರೀಂ ಕೋರ್ಟ್, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರಿಗೆ ರೂ. 50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ ಅವರ ಬಂಧನ “ಅನಗತ್ಯ” ಆಗಿತ್ತು ಎಂದು ಅಭಿಪ್ರಾಯಪಟ್ಟಿದೆ.
ಇಸ್ರೋ ಗೂಢಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರೆಂದು ವಿಜ್ಞಾನಿ ನಂಬಿ ನಾರಾಯಣ್ ವಿರುದ್ಧ ದೋಷಾರೋಪಣೆ ಮಾಡಿದ್ದ ಕೇರಳ ಪೋಲೀಸರು 24 ವರ್ಷಗಳ ಹಿಂದೆ ಅವರನ್ನು ಬಂಧಿಸಿದ್ದರು. ನಂಬಿ ನಾರಾಯಣ್ ಕೇರಳ ಪೋಲೀಸರಿಂದ “ಅನಗತ್ಯ ಬಂಧನಕ್ಕೊಳಗಾಗಿ ಕಿರುಕುಳ ಅನುಭವಿಸಿದ್ದಾರೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದಕ್ಕೆ ಮುನ್ನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ಕೆ.ಜೈನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಂಡಿದ್ದಿತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂದ್ ಅವರನ್ನೊಳಗೊಂಡ ಪೀಠವು ಈ ಮುನ್ನ ಜುಲೈ ನಲ್ಲಿ ಪ್ರಕರಣದ ವಿಚಾರಣೆ ನಡೆಸಿತ್ತು.ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಿಬಿಐ ಸಿದ್ದವಿದೆ ಎಂದು ತನಿಖಾ ಸಂಸ್ಥೆ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ತನ್ನ ಅಂತಿಮ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಸ್ರೋ ವಿಜ್ಞಾನಿ, ನಾರಾಯಣ್ ಅವರನ್ನು ಬೇಹುಗಾರಿಕೆ ಆರೋಪದಡಿ ನವೆಂಬರ್ 30, 1994 ರಂದು ಬಂಧಿಸಲಾಗಿತ್ತು.