ಬೆಂಗಳೂರು, ಸೆ.12- ಕಾಂಗ್ರೆಸ್-ಜೆಡಿಎಸ್ ಉರುಳಿಸಿರುವ ದಾಳಕ್ಕೆ ಬೆದರಿರುವ ಬಿಜೆಪಿ ತನ್ನವರನ್ನು ಹಿಡಿದಿಟ್ಟುಕೊಳ್ಳುವುದರ ಸಲುವಾಗಿ ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಕೊಂಡೊಯ್ಯಲು ಮುಂದಾಗಿದೆ.
ನಮ್ಮ ಶಾಸಕರನ್ನು ಆಪರೇಷನ್ ಮಾಡಿದರೆ ಪ್ರತಿಯಾಗಿ ನಾವು ಕೂಡ ಆಪರೇಷನ್ ಮಾಡಬೇಕಾಗುತ್ತದೆ ಎಂದು ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಇದರಿಂದ ತುಸು ಬೆದರಿರುವ ಬಿಜೆಪಿ ಯಾವುದೇ ಶಾಸಕರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಕಡೆ ಮುಖ ಮಾಡದಂತೆ ಸದ್ಯದಲ್ಲೇ ತನ್ನ 104 ಶಾಸಕರನ್ನು ರೆಸಾರ್ಟ್ಗೆ ಕೊಂಡೊಯ್ಯಲು ತೀರ್ಮಾನಿಸಿದೆ.
ಗೌರಿ-ಗಣೇಶ ಹಬ್ಬ ಮುಗಿಯತ್ತಿದ್ದಂತೆ ಎಲ್ಲಾ ಶಾಸಕರು ರೆಸಾರ್ಟ್ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ನಿವಾಸದಲ್ಲಿ ಇಂದು ಆಪ್ತ ಶಾಸಕರು ಹಾಗೂ ಮುಖಂಡರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಲಾಯಿತು. ಸಭೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.
ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಏನು ಬೇಕಾದರೂ ಮಾಡಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯುವ ಒಮ್ಮತದ ತೀರ್ಮಾಕ್ಕೆ ಬರಲಾಗಿದೆ. ಬೆಂಗಳೂರಿನ 11 ಶಾಸಕರನ್ನು ಪಕ್ಷದ ಮುಖಂಡ ಆರ್.ಅಶೋಕ್ ಕರೆತರಬೇಕು. ಉಳಿದಂತೆ ಬೇರೆ ಬೇರೆ ಭಾಗದ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯಲು ಕೆಲವು ಪ್ರಮುಖರಿಗೆ ಜವಾಬ್ದಾರಿ ನೀಡಲಾಗಿದೆ.
ಶಾಸಕರಾದ ಉಮೇಶ್ ಕತ್ತಿ, ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ ಸೇರಿದಂತೆ ಕೆಲವರಿಗೆ ಮಾತ್ರ ಈ ಜವಾಬ್ದಾರಿಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಹೇಳಲಾಗಿದೆ.
ಎರಡ್ಮೂರು ದಿನ ಕಾಯಿರಿ: ಎರಡು ಮೂರು ದಿನ ಎಲ್ಲ ಶಾಸಕರು ಕಾಯಿರಿ. ಚೌತಿ ಹಬ್ಬ ಮುಗಿದ ಬಳಿಕ ಶುಭ ಸುದ್ದಿ ಸಿಗಲಿದೆ. ಯಾರೊಬ್ಬರೂ ಆತುರ ಪಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿದ ಅವರು, ಚೌತಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿಗೆ ಶುಭ ಸುದ್ದಿ ಸಿಗಲಿದೆ. ಹೆಚ್ಚೆಂದರೆ ಎರಡು ಮೂರು ದಿನ ಮಾತ್ರ ಕಾದರೆ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಬೇರೆ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ ಎಂದು ಸಲಹೆ ಮಾಡಿದರು.
ಸರ್ಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್-ಜೆಡಿಎಸ್ನವರು ನಿಮಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಬಹುದು. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಇನ್ನು ಒಂದು ತಿಂಗಳೂ ಇರುವುದಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದು. ಎಚ್ಚರಿಕೆಯಿಂದ ಪ್ರತಿಯೊಬ್ಬರೂ ಇರಬೇಕೆಂದು ಸೂಚಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಅನೇಕ ಶಾಸಕರಿಗೆ ಸರ್ಕಾರ ಮುಂದುವರೆಯಲು ಇಷ್ಟವಿಲ್ಲ. ಪ್ರತಿಯೊಂದು ವಿಷಯದಲ್ಲೂ ಕೆಲವರು ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ಅನೇಕರು ಅಸಮಾಧಾನಗೊಂಡಿದ್ದಾರೆ.
ಸಭೆಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಶಾಸಕರಾದ ಸಿದ್ದುಸವದಿ, ಸುಕುಮಾರ್ ಶೆಟ್ಟಿ, ರೇಣುಕಾಚಾರ್ಯ, ಸುರೇಶ್, ಲಿಂಗಣ್ಣ, ಬೆಳ್ಳಿ ಪ್ರಕಾಶ್, ಅರವಿಂದ್ ಬೆಲ್ಲದ್, ಎಸ್.ಆರ್.ವಿಶ್ವನಾಥ್, ಪ್ರೀತಂ ಗೌಡ,ಕುಮಾರ ಬಂಗಾರಪ್ಪ, ಬಸವರಾಜ್ ತಡೆಸಗೂರು ಸೇರಿದಂತೆ 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.