ಲಂಡನ್: ಮುಂಬೈ ಜೈಲಿನಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ಎಂದು ಆರೋಪಿಸಿರುವ ಮದ್ಯದ ದೊರೆಯು ಇಂದು ಲಂಡನ್ ಕೋರ್ಟ್ಗೆ ಹಾಜರಾಗಲಿದ್ದು, ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಇಂದು ಮತ್ತೆ ಕೋರ್ಟ್ ವಿಚಾರಣೆ ನಡೆಸಲಿದೆ.
ಅಲ್ಲದೆ, ಭಾರತೀಯ ಅಧಿಕಾರಿಗಳು ಕಳುಹಿಸಿರುವ ಮುಂಬೈ ಜೈಲಿನಲ್ಲಿರುವ ವ್ಯವಸ್ಥೆ ಕುರಿತಾದ ವಿಡಿಯೋವನ್ನೂ ಪರಿಶೀಲಿಸಲಿದೆ ಎಂದು ತಿಳಿದುಬಂದಿದೆ. ಭಾರತದ ಬ್ಯಾಂಕ್ಗಳಿಗೆ 9000 ಕೋಟಿ ರೂ. ವಂಚಿಸಿ, ವಿದೇಶಕ್ಕೆ ಪಲಾಯನ ಮಾಡಿರುವ ಮಲ್ಯ, ಈ ಕಾರಣ ನೀಡಿ ಹಸ್ತಾಂತರ ವಾರೆಂಟ್ಗೆ ಬೇಲ್ ಪಡೆದಿದ್ದರು.
ವಂಚನೆ ಪ್ರಕರಣ ಸಂಬಂಧ ಮುಂಬೈನ ಆರ್ತುರ್ ರಸ್ತೆಯಲ್ಲಿರುವ ಜೈಲಿನ 12ನೇ ಕೋಣೆಯಲ್ಲಿ ವಿಜಯ್ ಮಲ್ಯರನ್ನು ಇರಿಸುವ ಬಗ್ಗೆ ಭಾರತದ ಕೋರ್ಟ್ ತೀರ್ಪು ನೀಡಿತ್ತು. ಆದರೆ ವಿದೇಶದಿಂದಲೇ ಆ ಕೋಣೆಯಲ್ಲಿ ಸರಿಯಾದ ಗಾಳಿ-ಬೆಳಕಿಲ್ಲ ಎಂದು ಮಲ್ಯ ಆರೋಪಿಸಿದ್ದರು. ಕಳೆದ ಜುಲೈನಲ್ಲಿ ಲಂಡನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೋಣೆಯ ಸಂಪೂರ್ಣ ವಿಡಿಯೋ ಮಾಡಿ ಕಳುಹಿಸುವಂತೆ ಭಾರತವನ್ನು ಕೇಳಲಾಗಿತ್ತು. ಮಲ್ಯ ಪರ ವಕೀಲರು ಯುಕೆಯ ಮಾನವ ಹಕ್ಕು ಸಂಸ್ಥೆ ಖುದ್ದು ಕೋಣೆಯ ಪರಿಶೀಲನೆ ನಡೆಸಬೇಕೆಂದೂ ಮನವಿ ಮಾಡಿದ್ದರು.
ಇಂದು ಕೋರ್ಟ್ ವಿಡಿಯೋ ಪರಿಶೀಲನೆ ಮಾಡಿದರೆ ಮಲ್ಯ ಹಸ್ತಾಂತರ ಬಗ್ಗೆ ಅಂತಿಮ ನಿರ್ಣಯ ಹೊರಬೀಳಬಹುದು ಎನ್ನಲಾಗುತ್ತಿದೆ.