3 ಮಕ್ಕಳ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು

ಬೆಂಗಳೂರು: ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಪದ್ಮನಾಭ ನಗರದ ಕನಕ ಬಡಾವಣೆಯಲ್ಲಿ ಮೂವರು ಮಕ್ಕಳ ಮೇಲೆ ಡೆಡ್ಲಿ ಡಾಗ್ ಅಟ್ಯಾಕ್ ಮಾಡಿವೆ.

ನಗರದಲ್ಲಿ ಬೀದಿ ನಾಯಿಗಳು ರಾಕ್ಷಸನ ಹಾಗೇ ವರ್ತಿಸುತ್ತಿದ್ದು, ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಆಟವಾಡುತ್ತಾ ಮನೆಗೆ ತೆರಳುತ್ತಿದ್ದ 7 ವರ್ಷದ ಬಾಲಕಿ, 9 ವರ್ಷದ ಬಾಲಕಿ ಹಾಗೂ 9 ವರ್ಷದ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ.

ಈ ಘಟನೆಯ ಪರಿಣಾಮ 9 ವರ್ಷದ ಬಾಲಕ ತನ್ಮಯ್ ಗೌಡನಿಗೆ ಗಂಭೀರ ಗಾಯಗಳಾಗಿದ್ದು, ಮಕ್ಕಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಪ್ರವೀಣ್ ಎಂಬ ಬಾಲಕ ಸೆಪ್ಟೆಂಬರ್ 2ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು. ಪ್ರವೀಣ್ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ಬಾಲಕನ ಮೇಲೆ ಸುಮಾರು 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದು, ಪ್ರವೀಣ್ ನ ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಸೆಪ್ಟೆಂಬರ್ 2ರಂದು ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ