ಅವರು ಒಂದು ಪಾನ್ ಮೂವ್ ಮಾಡಲಿ ಮುಂದೇನು ಮಾಡಬೇಕೆಂದು ನಮಗೆ ಗೊತ್ತಿದೆ : ಆಪರೇಷನ್ ಕಮಲಕ್ಕೆ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿಯ ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಇತ್ತ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಗೇಟು ನೀಡಲು ಮುಂದಾಗಿದ್ದರಿಂದ ಬಿಜೆಪಿ ನಾಯಕರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರೇ ನಮ್ಮ ವಶದಲ್ಲಿದ್ದಾರೆ. ಅವರು ಒಂದು ಪಾನ್ ಮೂವ್ ಮಾಡಲಿ ಮುಂದೇನು ಮಾಡಬೇಕೆಂದು ನಮಗೆ ಗೊತ್ತಿದೆ ಅಂತಾ ಹೇಳಿರೋದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ ಎನ್ನಲಾಗುತ್ತಿದೆ. ಹಾಗಾದ್ರೆ ನಿಜವಾಗಲೂ ಬಿಜೆಪಿ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದರಾ ಎಂಬ ಪ್ರಶ್ನೆಯೊಂದು ಮೂಡಿದೆ.

ಇತ್ತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ 6 ಮಂದಿ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳಿದ್ದಾರೆ. ಹೆಚ್‍ಡಿಕೆ ಹೇಳಿಕೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಚೌತಿ ನಂತರ ಸ್ವಲ್ಪ ಹುಷಾರಾಗಿರಿ, ಯಾರಿಗೂ ಹೆದರಬೇಡಿ. ನಿಮ್ಮನ್ನ ಯಾವಾಗ ಬೇಕಾದರೂ ನಾವು ಸಂಪರ್ಕ ಮಾಡುತ್ತೇವೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಆದ್ರು ನಮಗೆ ಕಾಲ್ ಮಾಡಿ ಎಂದು ಎಲ್ಲಾ ಬಿಜೆಪಿ ಶಾಸಕರಿಗೆ ರಕ್ಷಣಾತ್ಮಕ ಸಂದೇಶ ರವಾನಿಸಿದ್ದಾರಂತೆ.

ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ಆಗಿದೆ ಅಂತೆ. ಸರ್ಕಾರದ ಮಟ್ಟದಲ್ಲಿ ಗೊಂದಲಗಳಿದ್ದು, ಯಾವುದಕ್ಕೂ ಸಿದ್ಧರಾಗಿರುವಂತೆ ಬಿಎಸ್‍ವೈ ಸೂಚಿಸಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸರ್ಕಾರ ರಚಿಸುವುದಾಗಿಯೂ ಆಪ್ತ ಶಾಸಕರಿಗೆ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ